ಬೆಂಗಳೂರು:ನ್ಯಾಯ ಬೇಕು ಮೋದಿ ಎಂಬ ಪೊಸ್ಟರ್ನೊಂದಿಗೆ 12 ಪ್ರಶ್ನೆಗಳನ್ನು ಮುಂದಿಟ್ಟು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವಿಟ್ ಮೂಲಕ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. ಕಲಬುರಗಿ ಹಾಗೂ ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 12 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.ನ್ಯಾಯ ಬೇಕು ಮೋದಿ ಎಂಬ ಪೊಸ್ಟರ್ ನೊಂದಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ನೇಮಕಾತಿ ಹಗರಣ ಅರ್ಹರಿಗೆ ನ್ಯಾಯ ಕೊಡಿ:PSI ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೂ ಸೇರಿ ಮೊನ್ನೆ ನಡೆದ PWD ಸಹಾಯಕ ಎಂಜಿನಿಯರ್ ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾಗಿರುವ ಎಲ್ಲ ಅರ್ಹರಿಗೆ ನ್ಯಾಯ ಕೊಡಿಸಿ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.
ಲಂಚ ಕೊಟ್ಟು ವರ್ಗಾವಣೆ:ಕೆ.ಆರ್ ಪುರಂನ ಇನ್ಸ್ಪೆಕ್ಟರ್ ನಂದೀಶ್ 80 ಲಕ್ಷ ರೂ.ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ ಎಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತರರಿಗೆ ರಕ್ಷಣೆ ನೀಡುವ ಪೊಲೀಸರಿಗೇ ಹೀಗಾದರೆ, ಸಾಮಾನ್ಯರ ಗತಿ ಏನು ಮೋದಿ ಅವರೇ? ಎಂದು ಪ್ರಶ್ನಿಸಿದ್ದಾರೆ.
ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ:ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್ ಹಣ ನೀಡದಿರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿ ಅವರೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಲೂಟಿ:ಪರೇಶ್ ಮೇಸ್ತಾನ ಸಾವನ್ನೂ ತನ್ನ ಭರ್ಜರಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದ ಬಿಜೆಪಿ. ಈಗ ಆತನ ವಯೋವೃದ್ಧ ತಂದೆ-ತಾಯಿ ಕುಟುಂಬಕ್ಕೆ ನ್ಯಾಯ ಬೇಕು. ಕೊರೊನಾ ಕಾಲದಲ್ಲಿ ಸ್ಯಾನಿಟೈಜರ್, ಮಾಸ್ಕ್ ನಿಂದ ಹಿಡಿದು ವೆಂಟಿಲೇಟರ್ ವರೆಗೆ ಎಲ್ಲದರಲ್ಲೂ ರಾಜ್ಯ ಸರ್ಕಾರ ಲೂಟಿ ಮಾಡಿದ್ದರಿಂದ ಕನಿಷ್ಠ 3000 ಕೋಟಿ ಅವ್ಯವಹಾರ ನಡೆದಿದೆ. ಕೊರೊನಾದಿಂದ ಹಾದಿಯಲ್ಲಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ ಮೋದಿ ಅವರೇ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆ:ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಹೊಣೆಗೇಡಿತನದಿಂದ ನಾಡಿಗೆ ಬೆಳಕು ಕೊಟ್ಟ ಲಕ್ಷಾಂತರ ಮಂದಿಯ ಬಾಳು ಕತ್ತಲಾಗಿದೆ.ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ?. ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ.