ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಅಧಿಕಾರವನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಪುನರ್ ಸ್ಥಾಪನೆ ಮಾಡಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ. ಇಂದು ಹೈಕೋರ್ಟ್ ಪ್ರಧಾನ ಪೀಠದ ಮುಖ್ಯ ನ್ಯಾಯಮೂರ್ತಿ ಅವರ ನ್ಯಾಯಾಂಗಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ)ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರ ಎಂಬುದು ಕ್ಯಾನ್ಸರ್ ಗಿಂತ ಮಾರಕವಾಗಿದ್ದು, ಭವಿಷ್ಯದಲ್ಲಿ ದೇಶದ ಬೆಳವಣಿಗೆಗೆ ಮಾರಕವಾಗಲಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗವು ಭ್ರಷ್ಟಾಚಾರ ಎಂಬ ವ್ಯಾದಿಯನ್ನು ನಿರ್ಮೂಲನೆ ಮಾಡಬೇಕು. ಭಾರತದ ನ್ಯಾಯಾಂಗದ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ. ಜನರು ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ಕಾವಲುಗಾರ ಎಂದು ನ್ಯಾಯಾಲಯವನ್ನು ಪರಿಗಣಿಸಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವೂ ಇನ್ನೊಂದು ಅಂಗವಾಗಿದ್ದು, ಅದರಲ್ಲಿ ಮನುಷ್ಯರೇ ಕೆಲಸ ಮಾಡುತ್ತಾರೆ. ಆದರೆ, ನ್ಯಾಯಾಂಗದ ಕಾರ್ಯನಿರ್ವಹಣೆ ಬೇರೆ. ನ್ಯಾಯಾಂಗವು ಜನರ ನಂಬಿಕೆಯಾಗಿದ್ದು, ಇದು ಜನರ ಕೊನೆಯ ಭರವಸೆಯಾಗಿದೆ. ಎಲ್ಲಾ ದಾರಿಗಳು ಮುಚ್ಚಿದಾಗ ಕೊನೆಯದಾಗಿ ಜನರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಈ ದೇಶದ ಪ್ರತಿಯೊಬ್ಬ ಪ್ರಜೆಯು ಪೂಜಿಸುವ ದೇಗುಲ ನ್ಯಾಯಾಲಯ. ಇಲ್ಲಿ ಯಾವುದೇ ಜಾತಿ-ಮತ, ಭೇದ, ಪಂಥ ಎಂಬುದು ಇಲ್ಲ ಎಂದು ಬಿ.ವೀರಪ್ಪ ಹೇಳಿದರು.
ನ್ಯಾಯಾಂಗವು ಬಾಹ್ಯ ಮತ್ತು ಆಂತರಿಕ ಒತ್ತಡದಿಂದ ಕೆಲಸ ಮಾಡುತ್ತಿದೆ. ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ವಿಲೇವಾರಿ ಭಾರಿ ತಡವಾಗಿವಾಗುತ್ತಿರುವುದು ಸಮಸ್ಯೆಯಾಗಿದೆ. 27 ವರ್ಷ ವಕೀಲನಾಗಿ ಆನಂತರ ಸುಮಾರು 8.5 ತಿಂಗಳು ನ್ಯಾಯಮೂರ್ತಿಯಾಗಿ ಮಾಡಿದ ತಪ್ಪು ನನಗೆ ಅರಿವಾಗಿದೆ. ಎಂಟು ಮುಖ್ಯಮಂತ್ರಿಗಳು, ಎಂಟು ಅಡ್ವೊಕೇಟ್ ಜನರಗಳ ಅಡಿ ಕೆಲಸ ಮಾಡಿದ್ದು, ಐವರು ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಾದಿಸಿದ್ದೇನೆ ಎಂದು ಬಿ.ವೀರಪ್ಪ ಅವರು ವಾದ ಮಾಡಿರುವುದಾಗಿ ತಿಳಿಸಿದರು.