ನಟ ತಾರಕರತ್ನಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಬೆಂಗಳೂರು: ಹೃದಯಾಘಾತದ ಹಿನ್ನೆಲೆಯಲ್ಲಿ ನಗರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ನಂದಮೂರಿ ತಾರಕರತ್ನ ಅವರನ್ನು ತೆಲುಗು ನಟ ಜ್ಯೂ.ಎನ್ಟಿಆರ್ ಮತ್ತು ಕಲ್ಯಾಣ್ ರಾಮ್ ಅವರಿಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಸಚಿವ ಸುಧಾಕರ್ ಅವರೊಂದಿಗೆ ಇಬ್ಬರೂ ಬೆಳಿಗ್ಗೆ ಹೊಸೂರು ರಸ್ತೆಯಲ್ಲಿರುವ ಆಸ್ಪತ್ರೆಗೆ ಆಗಮಿಸಿದರು. ಇದಕ್ಕೂ ಮುನ್ನ, ಜ್ಯೂ.ಎನ್ಟಿಆರ್ ಮತ್ತು ಕಲ್ಯಾಣ್ ರಾಮ್ ಹೈದರಾಬಾದ್ನಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಆಸ್ಪತ್ರೆಗೆ ಶಿವಣ್ಣ ಭೇಟಿ:ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡ ಭೇಟಿ ನೀಡಿ, ತಾರಕರತ್ನ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ತಾರಕರತ್ನ ಗಂಭೀರ ಸ್ಥಿತಿಯಲ್ಲಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಪಾದಯಾತ್ರೆಯಲ್ಲಿ ಕುಸಿದು ಬಿದ್ದ ತಾರಕರತ್ನ: ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿಯ ಯುವಘಳಂ ಪ್ರಚಾರ ಚಟುವಟಿಕೆಗಳಲ್ಲಿ ತಾರಕರತ್ನ ತೊಡಗಿಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕುಪ್ಪಂನ ಪ್ರಮುಖ ಬೀದಿಗಳಲ್ಲಿ ಸಾಗಿದ ಯುವಘಳಂ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ ತಾರಕರತ್ನ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಟಿಡಿಪಿ ಕಾರ್ಯಕರ್ತರು ಕೂಡಲೇ ಅವರನ್ನು ಕುಪ್ಪಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ರವಾನಿಸಿದ್ದು, ಇದೀಗ ಚಿಕಿತ್ಸೆ ನಡೆಯುತ್ತಿದೆ. ಶನಿವಾರ ನಂದಮೂರಿ ಬಾಲಕೃಷ್ಣ ಮತ್ತು ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೂಡ ಆಸ್ಪತ್ರೆಗೆ ಬಂದು ತಾರಕರತ್ನ ಆರೋಗ್ಯ ವಿಚಾರಿಸಿದ್ದರು.
ಆಂಧ್ರ ಪ್ರದೇಶದ ಮಾಜಿ ಸಿಎಂ ದಿ.ಎನ್.ಟಿ.ರಾಮರಾವ್ ಅವರ ಚಿಕ್ಕಪ್ಪನ ಮಗ ತಾರಕರತ್ನ. ತಾರಕರತ್ನ ಅವರು ಯುವನಟ ಜೂ.ಎನ್.ಟಿ.ಆರ್ ಅವರ ಸಹೋದರ.
ಇದನ್ನೂ ಓದಿ: ತೀವ್ರ ನಿಗಾ ಘಟಕದಲ್ಲಿ ತಾರಕರತ್ನ: ಎನ್ಹೆಚ್ ಆಸ್ಪತ್ರೆಗೆ ಗಣ್ಯರ ಭೇಟಿ