ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಇದೀಗ ಹೊಸ ಸರ್ಕಾರವೂ ರಚನೆಯಾಗಿದೆ. ಈ ಮಧ್ಯೆ ಚುನಾವಣೆಯಲ್ಲಿ ಗೆದ್ದ ರಾಜ್ಯದ ಎಲ್ಲ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶಿಸಿದ್ದರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮೊದಲ ಬಾರಿ ಆಯ್ಕೆಯಾದ ಹಾಗೂ ಪುನರ್ ಆಯ್ಕೆಯಾದ ಶಾಸಕರಿಗೆ ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಡೆಡ್ ಲೈನ್ ನೀಡಲಾಗಿತ್ತು. ರಾಜ್ಯದ 224 ಶಾಸಕರಿಗೂ ಈ ಡೆಡ್ ಲೈನ್ ಅನ್ವಯವಾಗುತ್ತದೆ. ಆದರೆ ಆದೇಶ ನೀಡಿ ಹದಿನೈದು ದಿನ ಕಳೆದರೂ ಸಹ ಯಾವುದೇ ಶಾಸಕರಿಂದಲೂ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆಯಾಗಿಲ್ಲ.
ಕಳೆದ ಬಾರಿ ಲೋಕಾಯುಕ್ತ ನೋಟಿಸ್ಗೆ ಕೆಲವು ಶಾಸಕರು ಪ್ರತಿಕ್ರಿಯಿಸಿರಲಿಲ್ಲ. ಅಲ್ಲದೇ ಪುನರ್ ಆಯ್ಕೆಯಾದ ಶಾಸಕರು ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆ ಎಂದು ಈ ಬಾರಿ ಸುಮ್ಮನಾಗುವಂತಿಲ್ಲ. ದಾಖಲೆಗಳ ಸಮೇತ ಮತ್ತೆ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂನ್ 30 ರೊಳಗೆ ಶಾಸಕರು ಆಸ್ತಿ ವಿವರ ಸಲ್ಲಿಸದೇ ಇದ್ದಲ್ಲಿ ಲೋಕಾಯುಕ್ತ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದ್ದು, ಆಸ್ತಿ ವಿವರ ಸಂಗ್ರಹಿಸಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮೌಖಿಕ ಆದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.