ಬೆಂಗಳೂರು: 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ದಿನಾಂಕ 31-07-2023 ಕೊನೆಯ ದಿನವಾಗಿದ್ದು, ಅಡಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದೆ.
ಬೆಳೆ ವಿಮಾ ಯೋಜನೆ ಕುರಿತ ಪತ್ರಿಕಾ ಪ್ರಕಟಣೆ ಈ ಪೈಕಿ ದಾಂಡೇಲಿ, ಹಳಿಯಾಳ, ಅಂಕೋಲಾ ಮತ್ತು ಮುಂಡಗೋಡ ತಾಲೂಕಿನ ವಿಮಾ ಘಟಕಗಳಿಗೆ ಮಾವು ಬೆಳೆಯನ್ನು ಹಾಗೂ ಮುಂಡಗೋಡ ತಾಲೂಕು ಮತ್ತು ಶಿರಸಿ ತಾಲೂಕಿನ ಬನವಾಸಿ ಹೋಬಳಿಗೆ ಶುಂಠಿ ಬೆಳೆಯನ್ನು ಹೊಸದಾಗಿ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ರೈತರು ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬೆಳೆ ನಮೂದಿಸಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿ ಅಂತಿಮ ದಿನಾಂಕದ ಒಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕಾ ಇಲಾಖೆಯ ಕಚೇರಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಈವರೆಗೆ ಮಳೆಗೆ 38 ಮಂದಿ ಸಾವು, ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ
ಮಳೆ, ಪ್ರವಾಹದಿಂದಾಗುವ ಬೆಳೆಹಾನಿಗೆ ಪರಿಹಾರ ಹೆಚ್ಚಳ:ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗುವ ಬೆಳೆಗೆ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ನೀಡುವ ಇನ್ ಪುಟ್ ಸಬ್ಸಿಡಿ ಪರಿಷ್ಕರಿಸಿ ಹೆಚ್ಚುವರಿ ಮೊತ್ತದೊಂದಿಗೆ ಪರಿಷ್ಕೃತ ಪರಿಹಾರ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಸಂದಾಯ ಮಾಡುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರು ಋತುವಿನಲ್ಲಿ ಭಾರಿ ಮಳೆಯಿಂದ ಹಾಗೂ ನದಿ ಹರಿವಿನಿಂದ ಉಂಟಾಗುವ ಪ್ರವಾಹದಿಂದ ಜನ - ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿ ಆಗುತ್ತಿದೆ.
ಪ್ರತಿ ವರ್ಷ ಬೆಳೆಹಾನಿ ಆಗುವ ಪ್ರಕರಣಗಳಿಗೆ ವಿಪತ್ತು ಪ್ರತಿಕ್ರಿಯೆ ನಿಧಿಯ ಮಾರ್ಗಸೂಚಿಯಂತೆ ಅರ್ಹ ಪ್ರಕರಣಗಳಿಗೆ ಮಾತ್ರ ಪರಿಷ್ಕೃತ ದರದಲ್ಲಿ ಪರಿಹಾರವನ್ನು(ಇನ್ ಪುಟ್ ಸಬ್ಸಿಡಿ) ಪಾವತಿಸಲಾಗುತ್ತಿದೆ. 2023ನೇ ಸಾಲಿನ ಮುಂಗಾರ ಹಂಗಾಮಿನಲ್ಲಿ ಪ್ರವಾಹ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ, ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದ ವಿಪತ್ತ ಪ್ರತಿಕ್ರಿಯೆ ನಿಧಿ ಮಾರ್ಗಸೂಚಿಯಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ನೀಡಿರುವ ಪರಿಹಾರದಂತೆ ಬೆಳೆ ಹಾನಿಯಾದ ರೈತರಿಗೆ, ಹೆಚ್ಚಿನ ಆರ್ಥಿಕ ನೆರವು ನೀಡಲು ಇನ್ ಪುಟ್ ಸಬ್ಸಿಡಿ ಮೊತ್ತವನ್ನು ಗರಿಷ್ಠ 2 ಹೆಕ್ಟೇರ್ಗೆ ಸೀಮಿತಗೊಳಿಸಿ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 8500 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 5100 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 13,600 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್ಗೆ ವಿತರಿಸಲಾಗುತ್ತದೆ. ಅದೇ ರೀತಿ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 17,000 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 8000 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 25000 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್ಗೆ ವಿತರಿಸಲಾಗುತ್ತದೆ.