ಬೆಂಗಳೂರು:ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಜಾತಿ ಪದ್ಧತಿ ತಾಂಡವಾಡುತ್ತಿದೆ. ಇದರಿಂದ ದೇಶ ಹಾಳಾಗುತ್ತಿದ್ದು, ಈ ಪದ್ದತಿಯನ್ನು ದೂರವಿಡುವಂತಾಗಬೇಕು ಎಂದು ಹೈಕೋಟ್ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು. ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರು ರಚಿಸಿರುವ ಮತ್ತು ಜನಪ್ರಕಾಶನ ಹೊರ ತಂದಿರುವ 'ನ್ಯಾಯಾಂಗ ಒಳನೋಟ ಕೃತಿ ಲೋಕಾರ್ಪಣೆ' ಮಾಡಿದರು. ಬಳಿಕ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿಯನ್ನು ಹೋಗಲಾಡಿಸುವುದಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಧಿಕಾರಿಗಳ ಹೃದಯವೂ ಕಲ್ಲಾಗಿದೆ:ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಇದು ಕ್ಯಾನ್ಸರ್ ಮಾದರಿಯಲ್ಲಿ ಹರಡುತ್ತಿದೆ. ಪ್ರಸ್ತುತ ಭ್ರಷ್ಟಾಚಾರವನ್ನು ಮನೆಯಿಂದಲೇ ತೊಡೆದು ಹಾಕುವ ಕೆಲಸವಾಗಬೇಕು. ಇಲ್ಲವಾದಲ್ಲಿ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ದೊಡ್ಡ ಅಧಿಕಾರಿಗಳಾಗುವವರು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದ್ದಾರೆ. ಕಲ್ಲು ಕಟ್ಟಡಗಳಲ್ಲಿರುವ (ಸರ್ಕಾರಿ ಅಧಿಕಾರಿಗಳು) ಜನರ ಹೃದಯವೂ ಕಲ್ಲಾಗಿರಲಿದೆ. ನ್ಯಾಯಾಲಯ ಆದೇಶ ನೀಡಿ 10 ವರ್ಷ ಕಳೆದೂರು ಅದನ್ನು ಅನುಪಾಲನೆ ಮಾಡುವುದಿಲ್ಲ. ಈ ವ್ಯವಸ್ಥೆ ನೋಡಿದರೆ ನಾವು ನ್ಯಾಯಾಧೀಶರು ಎಂಬುನ್ನು ಮರೆತು ಹೋಗುವಂತಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮಸಾಕ್ಷಿಯೇ ಕಾವಲುಗಾರ: ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, "ನ್ಯಾಯಧೀಶರಾಗುವವರಿಗೆ ಮಾನವೀಯ ಮೌಲ್ಯಗಳು, ಅಂತಃಕರಣ ವಿದ್ದಲ್ಲಿ ಮಾತ್ರ ಉತ್ತಮ ನ್ಯಾಯ ಸಿಗಲು ಸಾಧ್ಯ. ನ್ಯಾಯಾಧೀಶರು ಬದ್ಧತೆ ಮತ್ತು ಸ್ವತಂತ್ರವಾಗಿ ತೀರ್ಪು ನೀಡಬೇಕು. ನ್ಯಾಯಾಧೀಶರಿಗೆ ಆತ್ಮಸಾಕ್ಷಿಯೇ ಕಾವಲುಗಾರನಾಗಿರಬೇಕು. ಪ್ರಮಾಣ ವಚನವೇ ಅವರ ಧರ್ಮವಾಗಬೇಕು" ಎಂದು ಹೇಳಿದರು.