ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಆಪ್ತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದ್ದು, ನಟಿ ಸಂಜನಾಳನ್ನು ಮತ್ತೆ ಸಿಸಿಬಿ ವಶಕ್ಕೆ ನೀಡಿದೆ.
ನಟಿಯರು ಮತ್ತು ಆಪ್ತರ ಸಿಸಿಬಿ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಅಧಿಕಾರಿಗಳು ಮಡಿವಾಳದ ಎಫ್ಎಸ್ಎಲ್ನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಒಂದನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ರಾಗಿಣಿ ಮತ್ತು ಆಪ್ತರನ್ನು ಸಿಸಿಬಿ ಕಸ್ಟಡಿಗೆ ಕೇಳದ ಹಿನ್ನೆಲೆ ವಿಚಾರಣಾಧೀನ ಕೈದಿಯಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಆದರೆ, ಸಂಜನಾ ಗಲ್ರಾನಿಯನ್ನು ಕೇವಲ 7 ದಿನ ಮಾತ್ರ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿದೆ. ಅಲ್ಲದೆ, ಕೆಲ ಸಂಜನಾ ಆಪ್ತರು ತಲೆ ಮರೆಸಿಕೊಂಡಿದ್ದಾರೆ. ಜೊತೆಗೆ ಡ್ರಗ್ ಮೂಲ ಪತ್ತೆ ಮಾಡಬೇಕಾಗಿದೆ. ಹೀಗಾಗಿ, ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಸಿಬಿ ಪರ ವಕೀಲರು ಮನವಿ ಮಾಡಿದರು. ಆದರೆ, ನ್ಯಾಯಾಲಯ ಸೆಪ್ಟೆಂಬರ್ 16 ರವರೆಗೆ ವಶಕ್ಕೆ ನೀಡಿ ಆದೇಶಿಸಿದೆ.
ಪರಪ್ಪನ ಆಗ್ರಹಾರದಲ್ಲಿ ಬಿಗಿ ಭದ್ರತೆ ಮತ್ತೊಂದೆಡೆ ನಟಿಯರ ಆಪ್ತರಾದ ರಾಹುಲ್, ಪ್ರಶಾಂತ್ ರಂಕ, ಸಿಮೋನ್ ಮತ್ತು ನಿಯಾಜ್ಗೂ ಕೂಡ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರವಿಶಂಕರ್ ಹಾಗೂ ವೀರೆನ್ ಖನ್ನಾನನ್ನ 2018 ರ ಬಾಣಸವಾಡಿ ಪ್ರಕರಣದಲ್ಲಿ ಮತ್ತೆ ವಶಕ್ಕೆ ನೀಡುವಂತೆ ಮನವಿ ಸಿಸಿಬಿ ಮನವಿ ಮಾಡಿದ ಹಿನ್ನೆಲೆ, ಇಬ್ಬರನ್ನ ಮತ್ತೆ ಸಿಸಿಬಿ ವಶಕ್ಕೆ ನೀಡಲಾಗಿದೆ.
ತೀರ್ಪು ಹೊರಬೀಳುತ್ತಿದ್ದಂತೆ ನಟಿ ರಾಗಿಣಿ ಪರ ವಕೀಲರು ನ್ಯಾಯಾಧೀಶರ ಎದುರು ಅನಾರೋಗ್ಯದ ವಾದವನ್ನು ಮುಂದಿಟ್ಟರು. ಆದರೆ, ನ್ಯಾಯಾಲಯ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿ, ನ್ಯಾಯಾಂಗ ಬಂಧನ ಒಪ್ಪಿಸಿದೆ. ನ್ಯಾಯಾಲಯದ ತೀರ್ಪಿನಿಂದ ಇದುವರೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ ರಾಗಿಣಿ ಮತ್ತು ಆಪ್ತರು, ಇಂದಿನಿಂದ ಜೈಲು ಹಕ್ಕಿಗಳಾಗಲಿದ್ದಾರೆ. ನಟಿ ರಾಗಿಣಿ ಜಾಮೀನು ಸಿಗುವವರೆಗೆ ಸಾಮಾನ್ಯ ಮಹಿಳಾ ಕೈದಿಯಂತೆ ಜೈಲಿನಲ್ಲಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಜೈಲಿಗೆ ಹೋದ ತಕ್ಷಣ ಒಂದು ಸುತ್ತಿನ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಜೈಲಿನ ಸಿಬ್ಬಂದಿ ಸೂಚಿಸಿದ ಕೋಣೆಯಲ್ಲಿ ಏಕಾಂಗಿಯಾಗಿರಬೇಕಾಗುತ್ತದೆ. ಈ ನಡುವೆ ಜಾಮೀನು ಸಿಕ್ಕರೆ ಹೊರಗಡೆ ಬರುವ ಅವಕಾಶ ದೊರೆಯಲಿದೆ. ಸಿಸಿಬಿ ಪೊಲೀಸರು ಪ್ರಕರಣ ಸಂಬಂಧ ಬಹುತೇಕ ಸಾಕ್ಷಗಳನ್ನು ಕಲೆ ಹಾಕಿರುವುದರಿಂದ ಆರೋಪಿಗಳು ಖಾಕಿ ಬಲೆಯಿಂದ ಹೊರಬರುವುದು ಬಹುತೇಕ ಕಷ್ಟ ಎನ್ನಲಾಗ್ತಿದೆ. ನಟಿ ಸೇರಿದಂತೆ ಆರೋಪಿಗಳನ್ನು ಕರೆದುಕೊಂಡು ಬರುತ್ತಿರುವ ಹಿನ್ನೆಲೆ, ಪರಪ್ಪನ ಅಗ್ರಹಾರ ಜೈಲಿನ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.