ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೆ.ಆರ್.ಪುರ (ಬೆಂಗಳೂರು):ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಒಡೆದು ಆಳುವ ನೀತಿ, ಕಮಿಷನ್, ಜಾತಿ ರಾಜಕೀಯ ಮತ್ತು ಕುಟುಂಬ ರಾಜಕೀಯದ ಪಕ್ಷಗಳಿವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದರು. ರಾಜ್ಯ ಬಿಜೆಪಿ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜೈಲು ಸೇರಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೆಡಿಎಸ್ ಕೂಡ ಭ್ರಷ್ಟರ ಪಕ್ಷ. ಇವು ಭಾಯಿ ಭಾಯಿ ಪಕ್ಷಗಳು. ಜೆಡಿಎಸ್‍ಗೆ ನೀವು ಮತ ಕೊಟ್ಟರೆ ಅದು ಕಾಂಗ್ರೆಸ್‍ಗೆ ನೀಡಿದಂತೆ ಎಂದು ಹೇಳಿದರು.
ಇದಕ್ಕೂ ಮೊದಲು ಕೆ.ಆರ್.ಪುರ ವಿನಾಯಕ ದೇವಸ್ಥಾನದ ಬಳಿ ಪಕ್ಷದ ಮಹಿಳಾ ಕಾರ್ಯಕರ್ತರು ರಾಜ್ಯದ ನಾಯಕರಿಗೆ ಭವ್ಯ ಸ್ವಾಗತ ಕೋರಿದರು. ಮಹಿಳೆಯರು ಕಳಸ ಹೊತ್ತು ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿದರು. ತೆರೆದ ವಾಹನದ ಮೂಲಕ ಕೆ.ಆರ್.ಪುರದ ಪ್ರಥಮ ದರ್ಜೆ ಕಾಲೇಜಿನ ವರೆಗೆ ರೋಡ್ ಶೋ ನಡೆಯಿತು.
ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿದ ನಡ್ಡಾ:ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು, ಇದರಿಂದ ಕೆ.ಆರ್.ಪುರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಜೆ.ಪಿ.ನಡ್ಡಾ ಅವರಿಗೂ ಸಂಚಾರ ದಟ್ಟಣೆಯ ಬಿಸಿ ತಟ್ಟಿತ್ತು. ಹೆಚ್ಎಎಲ್ ಏರ್ಪೋರ್ಟ್ನಿಂದ ಕೆ.ಆರ್.ಪುರಂ ಗೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾಗ ಸಂಚಾರ ದಟ್ಟಣೆ ಉಂಟಾಗಿದ್ದು ರಸ್ತೆಯಲ್ಲಿಯೇ 20 ನಿಮಿಷ ಕಾಲ ಕಳೆದರು.
ಟಿನ್ ಫ್ಯಾಕ್ಟರಿ ಸಮೀಪ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ರಸ್ತೆಗಳು ಕಿರಿದಾಗಿವೆ. ಪ್ರತಿದಿನ ವಾಹನ ಸಾವರರಿಗೆ ಈ ರಸ್ತೆ ನರಕಯಾತನೆಯಾಗಿದೆ. ಅದೇ ರೀತಿಯಲ್ಲಿ ನಡ್ಡಾರಿಗೂ ಟ್ರಾಫಿಕ್ ಜಾಮ್ ಬಿಸಿ ಮುಟ್ಟಿದೆ. ಇದರಿಂದಾಗಿ ರೋಡ್ ಶೋನಲ್ಲಿ ಭಾಗಿಯಾಗಲು ಸಾಧ್ಯಗಲಿಲ್ಲ. ನೇರವಾಗಿ ಅವರು ಕೆ.ಆರ್.ಪುರಂನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯುತಿದ್ದ ಬಿಜೆಪಿ ಸಮಾವೇಶಕ್ಕೆ 30 ನಿಮಿಷ ತಡವಾಗಿ ಆಗಮಿಸಿದರು.
ಕಾಂಗ್ರೆಸ್ಸಿಗರನ್ನು ಮನೆಯಲ್ಲೇ ಕೂರಿಸಿ:ಜೆ.ಪಿ.ನಡ್ಡಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶವಿರೋಧಿ ಕಾಂಗ್ರೆಸ್ಸಿಗರನ್ನು ಮನೆಯಲ್ಲೇ ಕೂರಿಸಿ ಎಂದರು. ಕಾಂಗ್ರೆಸ್ಸಿಗರು ಮಾನಸಿಕವಾಗಿ ದಿವಾಳಿ ಆಗಿದ್ದಾರೆ. ಒಡೆದು ಆಳುವ ನೀತಿಯ ಮುಖಂಡರನ್ನು ಸೋಲಿಸಿ ಮನೆಯಲ್ಲೇ ಕೂರಿಸಿ. ದೇಶದ 2ನೇ ದೊಡ್ಡ ಅರ್ಥ ವ್ಯವಸ್ಥೆಯಾಗಿ ಕರ್ನಾಟಕ ಹೊರಹೊಮ್ಮಿದೆ. ರೈತ ವಿದ್ಯಾನಿಧಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ರೈತರಿಗೆ ಸಾಲ, ಮೀಸಲಾತಿ ಹೆಚ್ಚಳ ಸೇರಿ ಸಮಗ್ರ ಅಭಿವೃದ್ಧಿಯ ಕಾರ್ಯವನ್ನು ಗಮನದಲ್ಲಿಟ್ಟು ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಪಿಎಫ್‍ಐ ನಾಯಕರನ್ನು ಕಾಂಗ್ರೆಸ್ ಬೆಂಬಲಿಸಿ ಅವರ ಕೇಸುಗಳನ್ನು ರದ್ದು ಮಾಡಿತ್ತು. ಆದರೆ, ಬಿಜೆಪಿ ಪಿಎಫ್‍ಐ ನಿಷೇಧಿಸಿದೆ ಎಂದು ತಿಳಿಸಿದರು.
ಬೆಂಗಳೂರಿನ ಗುಣಗಾನ:ಪ್ರಧಾನಿ ಮೋದಿಯವರು ಬಡವರ, ಮಹಿಳೆಯರ ಸೇರಿ ಎಲ್ಲ ವರ್ಗದ ಜನರಿಗೆ ನೆರವಾಗಿದ್ದಾರೆ. ಉಜ್ವಲ, ಉಜಾಲಾ, ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಮತ್ತಿತರ ಯೋಜನೆಗಳಿಂದ ಜನಸಾಮಾನ್ಯರಿಗೆ ಪ್ರಯೋಜನ ಸಿಕ್ಕಿದೆ. ರಾಜ್ಯ ರಾಜಧಾನಿ ಗುಣಗಾನ ಮಾಡುತ್ತಾ ಭಾರತ ರಕ್ಷಣಾ, ವಿಜ್ಞಾನ, ಸೇರಿದಂತೆ ವಿವಿಧ ವಿಭಾಗದಲ್ಲಿ ಕರ್ನಾಟಕ ಹಾಗೂ ಬೆಂಗಳೂರು ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮುನಿರತ್ನ, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡ ಸಚ್ಚಿದಾನಂದ ಮೂರ್ತಿ, ಜಿಲ್ಲಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಮುಕ್ತ ಕರ್ನಾಟಕದ ಸಂಕಲ್ಪ ಮಾಡಿ: ಅಣ್ಣಾಮಲೈ