ಬೆಂಗಳೂರು:ನಾವು ಆಯುಷ್ಮಾನ್ ಕಾರ್ಡ್ ಅನ್ನು ರಿಕ್ಷಾವಾಲಾ, ಡ್ರೈವರ್, ಕಂಡಕ್ಟರ್ ಈ ವರ್ಗಕ್ಕೆ ನೀಡಿದ್ದೇವೆ. ಆಯುಷ್ಮಾನ್ ಕಾರ್ಡ್ ನಾವು ಬೊಮ್ಮಾಯಿ , ಕಟೀಲ್ಗೆ ನೀಡಿಲ್ಲ. ಕಾಂಗ್ರೆಸ್ ಘೋಷಣೆ ಮಾಡಿರುವ ಸುಳ್ಳಿನ ಘೋಷಣೆಯನ್ನು ನಾವು ಮಾಡಿಲ್ಲ. ನಾವು ಯಾವ ವರ್ಗಕ್ಕೆ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದರು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಿಜೆಪಿ ಕರ್ನಾಟಕ ಪ್ರಣಾಳಿಕೆ ಬಿಡುಗಡೆ ಮಾಡಲು ಅವಕಾಶ ಸಿಕ್ಕಿದೆ. ಇದರಲ್ಲಿರೋ ಪ್ರತೀ ಅಂಶ ಎ.ಸಿ ರೂಮಲ್ಲಿ ಕೂತು ಮಾಡಿಲ್ಲ. ಸಾವಿರ ಮನೆಗಳು, ವಿವಿಧ ವಲಯಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಬಿಜೆಪಿ ಸರ್ಕಾರ ಅವಕಾಶವನ್ನ ಸದ್ಬಳಕೆ ಮಾಡಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಉತ್ತಮ ಸೇವೆ ಮಾಡಿದ್ದಾರೆ. ಸಿಕ್ಕ ಅವಕಾಶದಲ್ಲಿ ಜನ ಸೇವೆ ಮಾಡುವ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ರಿವರ್ಸ್ ಗೇರ್ ಸರ್ಕಾರ ಇತ್ತು. ಲೂಟಿ ಮಾಡುವ ಮತ್ತು ಗಲಭೆ ಕೋರರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿತ್ತು. ಅವರ ಅವಧಿಯಲ್ಲಿ ಗಲಭೆ, ಹತ್ಯೆ ಆಗುವ ಮೂಲಕ ಕರ್ನಾಟಕಕ್ಕೆ ಕರಾಳ ದಿನವಾಗಿತ್ತು. ಮೋದಿ ಅವರ ಪ್ರಾಧನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಿದ್ದರಾಮಯ್ಯ ಕಾಲದಲ್ಲಿ ಕೇವಲ 17 ಜನ ಫಲಾನುಭವಿಗಳಿಗೆ ಮಾತ್ರ ತಲುಪಿತ್ತು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸರ್ಕಾರ ಬಂದ ಬಳಿಕ 15 ಸಾವಿರ ಕೋಟಿ ರೂ., 54 ಲಕ್ಷ ರೈತರಿಗೆ ಮುಟ್ಟಿದೆ. ಇದು ಡಬಲ್ ಇಂಜಿನ್ ಸರ್ಕಾರ. ಅವರದ್ದು ಟ್ರಬಲ್ ಇಂಜಿನ್ ಸರ್ಕಾರ. ನಮ್ಮದು ಅಭಿವೃದ್ಧಿ ಸರ್ಕಾರ, ಅವರದ್ದು ರಿವರ್ಸ್ ಗೇರ್ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಭಾಗ್ಯಲಕ್ಷ್ಮಿ ಯೋಜನೆ 57 ಸಾವಿರಕ್ಕಿಳಿಯಿತು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ಬಂದ ಬಳಿಕ ಮೂರು ಲಕ್ಷ ಮಕ್ಕಳಿಗೆ ತಲುಪಿದೆ. 11,600 ಕೋಟಿ ಕೃಷಿಗೆ ಆಧ್ಯತೆ ನೀಡಲಾಗಿದೆ. ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರದ ಜೊತೆಗೂಡಿ 8 ಸಾವಿರಕ್ಕೂ ಹೆಚ್ಚು ಪಿಹೆಚ್‌ಸಿ ತೆರೆಯಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್‌ಐ ಮೇಲಿದ್ದ 175 ಕೇಸ್ ತೆಗೆದು ಹಾಕಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಿಎಫ್‌ಐ ಬ್ಯಾನ್ ಮಾಡಲಾಗಿದೆ ಎಂದರು.
11 ಲಕ್ಷ ರೈತರ ಮಕ್ಕಳಿಗೆ ಅನುಕೂಲ ಆಗಿದೆ:ಬೊಮ್ಮಾಯಿ ರೈತ ವಿದ್ಯಾನಿಧಿ ಯೋಜನೆ ವಿಸ್ತರಿಸೋ ಮೂಲಕ 11ಲಕ್ಷ ರೈತರ ಮಕ್ಕಳು, ನೇಕಾರರು, ಆಟೋ, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ಅನುಕೂಲ ಆಗಿದೆ. ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡ್ತಾರೆ. ಬೊಮ್ಮಾಯಿ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ತಲಾ ಶೇ 2ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈಗ ನ್ಯಾಯಾಲಯದ ಮೆಟ್ಟಿಲೇರಿದರೂ, ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಶೀಘ್ರವೇ ಅದೆಲ್ಲವೂ ಇತ್ಯರ್ಥ ಆಗಿ, ಮೀಸಲಾತಿ ಸಿಗಲಿದೆ ಎಂದರು.
ಭದ್ರಾ ಯೋಜನೆಗೆ 5,300 ಕೋಟಿ ಬಿಡುಗಡೆ:ಭದ್ರ ಮೇಲ್ಡಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ಮಾಡಲಾಗಿದೆ. ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ನೀಡಲಾಗಿದೆ. ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ನೀಡಲಾಗಿದೆ. ಕರ್ನಾಟಕ ಎನ್ಇಪಿ ಜಾರಿಗೆ ತಂದಿರೋ ಮೊದಲ ರಾಜ್ಯವಾಗಿದೆ. ನಮ್ಮ ಕ್ಲಿನಿಕ್ ಆರಂಭಿಸಿದ್ದು, 108 ಬೆಂಗಳೂರಿನಲ್ಲಿ ಆರಂಭವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕೊವೀಡ್, ಆರ್ಥಿಕ ಕುಸಿತ, ಜನರ ಜೀವನ ಅಸ್ತವ್ಯಸ್ಥ ಇದನ್ನು ನಿಭಾಯಿಸಲು ಪ್ರಾಮುಖ್ಯತೆ ಇತ್ತು. ಇದನ್ನೆಲ್ಲ ಆಧಾರಿಸಿ ನಾವು ಪ್ರಣಾಳಿಕೆ ಮಾಡಿದ್ದೇವೆ. ಕೃಷಿಗೆ ನಾವು ಬಹಳಷ್ಟು ಒತ್ತು ಕೊಟ್ಟಿದ್ದೇವೆ ಎಂದರು. ಇಡೀ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷ ಬಿಜೆಪಿ ರಾಷ್ಟ್ರದ ರಾಜಕಾರಣದಲ್ಲಿ ಬಹಳ ದಿಕ್ಸೂಚಿಯ ಪಾತ್ರ ವಹಿಸಿದೆ. ದೇಶ ಹಾಗೂ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಹಾಗೂ ಆಡಳಿತ ಮಾಡಬೇಕಾಗುತ್ತದೆ. ಅತ್ಯಂತ ಪ್ರಬಲವಾಗಿ ಒಕ್ಕೂಟ ರಾಜ್ಯಗಳೇ ಪ್ರಬಲ ರಾಷ್ಟ್ರವಾಗಬೇಕು. ಕರ್ನಾಟಕದ ಅಭಿವೃದ್ಧಿ, ಆಡಳಿತದ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ರಾಜ್ಯದ ಮೇಲೆ ಅಷ್ಟೇ ಅಲ್ಲ ರಾಷ್ಟ್ರದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕೆ ಪ್ರಜಾ ಪ್ರಣಾಳಿಕೆ ಮಾಡಿದ್ದೇವೆ. ಸುಧಾಕರ್ ನೇತೃತ್ವದ ಒಳ್ಳೆಯ ತಂಡ, ಮೂರು ತಿಂಗಳಿಂದ ಎಲ್ಲರ ಅಭಿಪ್ರಾಯ ಪಡೆದು, ಜನರ ಭಾವನೆ, ಜನರ ಧ್ವನಿ ಅಳವಡಿಸಿ, ಪ್ರಜಾ ಪ್ರಣಾಳಿಕೆ ಆಗಿ ಹೊರಹೊಮ್ಮಿದೆ. ರಾಜ್ಯ ಸರ್ಕಾರ ನಡೆಯುವ ದಾರಿ ದಿಕ್ಕು ತೋರಿಸುವ ಪ್ರಣಾಳಿಕೆ ಆಗಿದೆ ಎಂದರು.
150 ಸೀಟು ಗೆಲ್ಲುವ ಗುರಿ:ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಈಗಾಗಲೇ ಪ್ರಣಾಳಿಕೆ ಬಗ್ಗೆ ಸಿಎಂ ಹೇಳಿದ್ದಾರೆ. ಇದನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. 150 ಸೀಟು ಗೆಲ್ಲುವ ಗುರಿ ಹೊಂದಿದ್ದೇವೆ. ಕಾರ್ಯಕರ್ತರು ಜನರಿಗೆ ಇದನ್ನ ತಲುಪಿಸೋ ಕೆಲಸ ಮಾಡಬೇಕು. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರೋದು. ಜನ ಇದನ್ನ ಸ್ವೀಕರಿಸಬೇಕು. ಬಿಜೆಪಿ ಬೆಂಬಲಿಸಬೇಕು ಎಂದರು.
ಪ್ರಣಾಳಿಕೆ ಸಮಿತಿ ಸಂಚಾಲಕ ಸುಧಾಕರ್ ಮಾತನಾಡಿ, ನಮ್ಮ ಪ್ರಣಾಳಿಕೆ ನೈಜತೆಯಿಂದ ಕೂಡಿರಬೇಕು. ಪ್ರಧಾನಿ ಮೋದಿ ಅವರು ಹೇಳಿದಂತೆ, ಮುಂದಿನ 25 ವರ್ಷಗಳ ಕಟ್ಟುವ, ಯುವಕರಿಗೆ ಆಧ್ಯತೆ ನೀಡಲಾಗಿದೆ. 38 ವಿವಿಧ ವಲಯಗಳ ಮೂಲಕ, 170 ವಿಧಾನಸಭಾ ಕ್ಷೇತ್ರಗಳಿಂದ ಸಲಹೆ ಪಡೆಯಲಾಗಿದೆ. 6 ಲಕ್ಷ ಸಲಹೆಗಳು ಬಂದಿವೆ. 17 ರಾಷ್ಟ್ರೀಯ ನಾಯಕರು ಸಹ ನಮ್ಮ ಪ್ರಣಾಳಿಕೆ ತಯಾರಿಯಲ್ಲಿ ಭಾಗಿಯಾಗಿದ್ದರು. ವಿಷಯ ತಜ್ಞರು, ವಿಶೇಷ ಪರಿಣಿತರು ಭಾಗಿಯಾಗಿದ್ದು, 900 ಸಲಹೆ ಬಂದಿವೆ. ಸೆಕ್ಟರ್ ಮೂಲಕ ರೈತರು, ಕೂಲಿ ಕಾರ್ಮಿಕರು, ಮಕ್ಕಳ ಆರೋಗ್ಯ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ ಎಂದರು.
ಬೇರೆ ಪಕ್ಷದ ರೀತಿ ಸುಳ್ಳು ಭರವಸೆ ನೀಡದೆ, ವಾಸ್ತವಿಕ ಭರವಸೆ ನೀಡಲಾಗುತ್ತಿದೆ. 13 ರಾಜ್ಯಗಳಲ್ಲಿ ಭರವಸೆ ನೀಡಿರುವ ಪಕ್ಷವನ್ನ ಜನ ತಿರಸ್ಕರಿಸಿದ್ದಾರೆ. ಒಂದೇ ಒಂದು ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ನಾವು ಆರೋಗ್ಯ ಯುಕ್ತ ನಾಡು, ಸಂಪದ್ಭರಿತ ನಾಡನ್ನ ಮಾಡಬೇಕು. ಮಹಿಳೆಯರನ್ನ ಮುಖ್ಯವಾಹಿನಿಗೆ ತರಬೇಕು. ವಯೋವೃದ್ಧರು, ಅಂಗವಿಕಲ, ವಿಧವೆಯರನ್ನ ಮುಖ್ಯ ವಾಹಿನಿಗೆ ತರಬೇಕು. ನೈಜ್ಯತೆಯಿಂದ ಕೂಡಿರೋ ವಿಚಾರವನ್ನ ನಮ್ಮ ಸಿಎಂ ಬಿಡುಗಡೆ ಮಾಡಲಿದ್ದಾರೆ. ಸಿಲಿಂಡರ್ ಬೆಲೆ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ಭಗವದ್ಗೀತೆ ಎಷ್ಟು ಗೌರವಿಸ್ತೇವೆ, ನಮ್ಮ ಪ್ರಣಾಳಿಕೆ ಅಷ್ಟೇ ಗೌರವದಿಂದ ನೋಡಬೇಕು ಎನ್ನುವ ರೀತಿ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದರು.
ಓದಿ:ಏಕರೂಪದ ನಾಗರಿಕ ಸಂಹಿತೆ ಜಾರಿ, BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು, 3 ಗ್ಯಾಸ್ ಸಿಲಿಂಡರ್ ಫ್ರೀ!- ಬಿಜೆಪಿ ಪ್ರಣಾಳಿಕೆ