ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಪ್ರಕರಣದಲ್ಲಿ ಎಲ್ಲಾ ಹದಿನಾರು ಗುತ್ತಿಗೆ ನೌಕರರನ್ನು ಪಾಲಿಕೆಗೆ ಸೇರಿಸಿಕೊಳ್ಳುವಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪಾತ್ರವೂ ಇದೆ. ಮೊದಲು ಅವರನ್ನು ಹೊಣೆ ಮಾಡಬೇಕು ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಫರಾಜ್ ಖಾನ್, ಯಾವುದೇ ಕೋಮು ಭಾವನೆ ಇಲ್ಲದೆ, ಎಲ್ಲಾ ಸಮುದಾಯದ ಜನರಿಗೂ ಬೆಡ್ ಒದಗಿಸಲು, ಆಕ್ಸಿಜನ್ ನೀಡಲು ರಾತ್ರಿ ಹಗಲು ದುಡಿದಿದ್ದೇನೆ. ವಾರ್ ರೂಂ ದಂಧೆಯಲ್ಲಿ ನನ್ನ ಹೆಸರು ಸೇರಿಸಿಕೊಂಡಿರುವುದು ಅಪಾರ ನೋವು ತಂದಿದೆ. ನನ್ನ ಕೆಲಸ ಏನಿದ್ದರೂ ಕೋವಿಡ್ ಕೇರ್ ಸೆಂಟರ್ಗಳ ಉಸ್ತುವಾರಿ ಮತ್ತು ಘನತ್ಯಾಜ್ಯ ನಿರ್ವಹಣೆ ಅಷ್ಟೇ. ಆದರೆ ವಾರ್ ರೂಂಗೆ ಬೇಕಾದ ವೈದ್ಯರು, ಸಿಬ್ಬಂದಿ ನೇಮಕ ಆರೋಗ್ಯ ಇಲಾಖೆ ಹಾಗೂ ಆಯಾ ಬಿಬಿಎಂಪಿ ವಲಯಗಳ ಕೆಲಸ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಈಟವಿ ಭಾರತಕ್ಕೂ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.