ಬೆಂಗಳೂರು:''ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ಗಳ, ಪ್ಲಾಗ್ ಹಾಗು ಬಂಟಿಂಗ್ಸ್ ಇತ್ಯಾದಿಗಳನ್ನು ತೆರವುಗಳಿಸುವ ಜವಾಬ್ದಾರಿ ಸಂಬಂಧಪಟ್ಟ ಜಂಟಿ ಆಯುಕ್ತ ಮತ್ತು ಮುಖ್ಯ ಎಂಜಿನಿಯರ್ ಅವರದ್ದಾಗಿರುತ್ತದೆ'' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 16ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು:ನಗರದಲ್ಲಿ ಒಂದೇ ಒಂದು ಅನಧಿಕೃತ ಪ್ಲೆಕ್ಸ್ ಕಂಡುಬಂದರೆ, ಪಾಲಿಕೆ ಹಾಗೂ ರಾಜ್ಯ ಸರಕಾರ ತಲಾ 50 ಸಾವಿರ ರೂ.ಗಳನ್ನು ಠೇವಣಿ ಇಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ಕೂಡಲೇ ತುರ್ತು ಕ್ರಮ ಕೈಗೊಂಡು ಅನಧಿಕೃತ ಹೋರ್ಡಿಂಗ್ಸ್, ಪ್ಲೆಕ್ಸ್, ಬ್ಯಾನರ್ ಹಾಗು ಎಲ್‌ಇಡಿ ಇನ್ನಿತರೆ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಕುರಿತು ಅಂಕಿ-ಅಂಶದ ದಾಖಲೆಗಳ ಸಮೇತ ಅನುಪಾಲನಾ ವರದಿಯನ್ನು ಆಗಸ್ಟ್ 16ರೊಳಗೆ ಕಡ್ಡಾಯವಾಗಿ ಸಲ್ಲಿಸಲು ಆದೇಶದಲ್ಲಿ ಸೂಚಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ ಪ್ರತಿ ವರದಿ ನೀಡದಿದ್ದಲ್ಲಿ ಕರ್ತವ್ಯ ಲೋಪ ಎಸಗಿದ ಜಂಟಿ ಆಯುಕ್ತ ಹಾಗೂ ಮುಖ್ಯ ಅಭಿಯಂತರರನ್ನು ವೈಯಕ್ತಿಕ ಜವಾಬ್ದಾರರನ್ನಾಗಿ ಮಾಡಲಾಗುವುದು. ಅಲ್ಲದೇ ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಗು ಎಲ್‌ಇಡಿ ಇನ್ನಿತರೆ ಜಾಹಿರಾತು ಫಲಕಗಳನ್ನು ತೆರವುಗೊಳಿಸದಿದ್ದಲ್ಲಿ, ಜಂಟಿ ಆಯುಕ್ತ ಹಾಗೂ ಮುಖ್ಯ ಅಭಿಯಂತರರರಿಂದ ತಲಾ 50 ಸಾವಿರ ರೂ.ಗಳನ್ನು ವಸೂಲಿ ಮಾಡಿ ಕೋರ್ಟ್‌ನಲ್ಲಿ ಠೇವಣಿ ಇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ ಪ್ರತಿ ಇತ್ತೀಚಿನ ಕಾರ್ಯಾಚರಣೆ:ಬೆಂಗಳೂರು ನಗರದಲ್ಲಿ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಮತ್ತು ಹೋರ್ಡಿಂಗ್ಸ್ ಹಾವಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಲು ಮುಂದಾಗಿದ್ದ ಸರ್ಕಾರವು 'ಆಪರೇಷನ್ ಫ್ಲೆಕ್ಸ್' ಕೈಗೊಂಡಿತ್ತು. ಹೈಕೋರ್ಟ್ ಛೀಮಾರಿ ಹಾಕಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ 59,000 ಫ್ಲೆಕ್ಸ್ ಬ್ಯಾನರ್ಗಳನ್ನು ಬಿಬಿಎಂಪಿ ತೆರವು ಮಾಡಿತ್ತು.
ಬಿಬಿಎಂಪಿಯ ತೆರೆದ ಸ್ಥಳಗಳ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್, ಫ್ಲೆಕ್ಸ್ ಮತ್ತು ಪೋಸ್ಟರ್ ಹಾಕುವುದನ್ನು ನಿಷೇಧ ಮಾಡಲಾಗಿದೆ. ಆದೇಶ ಉಲ್ಲಂಘಿಸುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಬಿಬಿಎಂಪಿ ಅನೇಕ ಬಾರಿ ತಿಳಿಸಿತ್ತು. ಆದ್ರೆ, ರಾಜಕಾರಣಿಗಳ ಬ್ಯಾನರ್ ಮತ್ತು ಫ್ಲೆಕ್ಸ್‌ಗಳು ವಿವಿಧೆಡೆ ರಾರಾಜಿಸುತ್ತಿದ್ದರೂ ಯಾವುದೇ ಕ್ರಮವಹಿಸಿರಲಿಲ್ಲ ಎಂದು ಸಾರ್ವಜನಿಕರು ಕೂಡಾ ತೀವ್ರ ಆಕ್ರೋಶ ಹೊರಹಾರಕಿದ್ದರು.
ಹೈಕೋರ್ಟ್ ಹೇಳಿದ್ದೇನು?:ಅಕ್ರಮ ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳನ್ನು ತೆರವು ಮಾಡುವಂತೆ ಆ.2 ರಂದು ಹೈಕೋರ್ಟ್ ಬಿಬಿಎಂಪಿಗೆ ಆದೇಶ ಕೊಟ್ಟಿತ್ತು. ಬೆಂಗಳೂರು ನಗರದಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಡೆಯುವ ನಿಟ್ಟಿನಲ್ಲಿ ಪಂಚವಾರ್ಷಿಕ ಯೋಜನೆ ಬೇಕೇ? ಹಾಗೂ ಫ್ಲೆಕ್ಸ್ ತೆರವಿಗೆ ಶುಭ ವೇಳೆಗಾಗಿ ಕಾಯುತ್ತಿದ್ದೀರಾ? ಎಂದು ಹೈಕೋರ್ಟ್ ಇತ್ತೀಚಿಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ:ಇನ್ಮುಂದೆ ಬೆಂಗಳೂರಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ರೆ 50 ಸಾವಿರ ರೂಪಾಯಿ ದಂಡ: ಡಿಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ