ಬೆಂಗಳೂರು:ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ. ಇದಕ್ಕಾಗಿ ರಾಜ್ಯದ ಗೃಹ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೇಶ ವಿರೋಧಿ ಚಟುವಟಿಕೆ ವಿರುದ್ಧ ಜಂಟಿ ಕಾರ್ಯಾಚರಣೆ ಎಂದ ಗೃಹ ಸಚಿವ ಆರ್ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ ಎಸ್ ರಾಮಯ್ಯ ಕಾಲೇಜು ಆಸ್ಪತ್ರೆಯಲ್ಲಿ ಶಂಕಿತ ಉಗ್ರ ಎನ್ನುವ ಮಾಹಿತಿ ಆಧಾರದಲ್ಲಿ ವೈದ್ಯ ಹಾಗೂ ಆತನ ಸಹಚರರನ್ನು ಬಂಧಿಸಿರುವ ಬಗ್ಗೆ ಈಗಾಗಲೇ ರಾಷ್ಟ್ರೀಯ ತನಿಖಾದಳ ಪ್ರಕಟಣೆ ಹೊರಡಿಸಿದೆ. ಕೆಲ ಪ್ರಕರಣಗಳಲ್ಲಿ ನಾವು ಅವರಿಗೆ ಸಹಕಾರ, ಅವರು ನಮಗೆ ಸಹಕಾರ ನೀಡುವುದು ಮುಂದುವರೆದಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ದೇಶದ ಸುರಕ್ಷತೆ ಆಂತರಿಕ ಸಮಸ್ಯೆಗೆ ಮತ್ತು ದೇಶದ ಗಡಿಯಾಚೆಗೆ ಇರುವ ಶಕ್ತಿಗಳು ಕೆಲಸ ಮಾಡುತ್ತಿವೆ. ಅದರ ವಿರುದ್ಧ ಜಂಟಿ ಕಾರ್ಯಾಚರಣೆ ಮಾಡುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ನಾವು ಮುಂದುವರೆಯಲಿದ್ದೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೆ ಆರೆಎಸ್ಎಸ್ ಹತ್ತಿರದ ನಾಯಕರಿಂದ ಸಂಚು ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕಾಂಗ್ರೆಸ್ನಲ್ಲೇ ವಾತಾವರಣ ಸೂಕ್ಷ್ಮವಾಗಿದೆ. ಬಿಜೆಪಿ ಬಗ್ಗೆ ಅವರು ಮಾತನಾಡುವುದು ಬೇಡ. ಬಿಎಸ್ವೈ ಸಂಘದ ಹಿನ್ನೆಲೆಯಿಂದ ಬಂದವರು. ಸಂಘ ಮತ್ತು ಬಿಎಸ್ವೈ ಎರಡೂ ನಮಗೆ ಒಂದೇ. ನಮ್ಮಲ್ಲಿ ವ್ಯತ್ಯಾಸಗಳು ಯಾವುದು ಇಲ್ಲ. ವ್ಯತ್ಯಾಸಗಳಿದ್ದರೆ ಅದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.
ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆಯಲ್ಲಿನ ನಷ್ಟವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ದಂಡವನ್ನು ವಸೂಲಿ ಮಾಡಲು ಕ್ಲೇಮ್ ಕಮೀಷನರ್ ನೇಮಕಕ್ಕೆ ಅನುಮತಿ ಕೋರಿ ಹೈಕೋರ್ಟ್ಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಸಂಬಂಧ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.