ಬೆಂಗಳೂರು:ಕೋವಿಡ್ನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಇನ್ನು ಉದ್ಯೋಗಾವಕಾಶ ಸುಧಾರಣೆಗೆ ಅಂದಾಜು 8-9 ತಿಂಗಳು ಬೇಕು ಎಂದು ನಗರ ಮೂಲದ ಟೀಮ್ ಲೀಸ್ ಸಂಸ್ಥೆ ವರದಿ ಮಾಡಿದೆ.
ಕೊರೊನಾ ಸೋಂಕು ಮನುಷ್ಯನ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ, ಅಷ್ಟೇ ಪರಿಣಾಮ ವಿಶ್ವದ ಆರ್ಥಿಕತೆಗೆ ಕೊಡಲಿ ಪೆಟ್ಟು ನೀಡಿದೆ. ವಿವಿಧ ವಲಯಗಳಿಂದ ನೂರಾರು ಜನರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ಇಷ್ಟಲ್ಲದೆ ಇನ್ನು 3-4 ತಿಂಗಳಲ್ಲಿ ಲಕ್ಷಾಂತರ ಜನ ಕೆಲಸ ಕಳೆದುಕೊಳ್ಳುವುದು ನಿಶ್ಚಿತ ಎಂದು ತಜ್ಞರು ಲೆಕ್ಕ ಹಾಕುತ್ತಿದ್ದಾರೆ. 21 ವಲಯಗಳನ್ನು ಪರಿಗಣಿಸಿದ ಈ ವರದಿ, ಬ್ಲೂ ಕಾಲರ್ ಉದ್ಯೋಗಾವಕಾಶದಲ್ಲಿ ಶೇ.10 ಏರಿಕೆಯನ್ನು ಅನ್ಲಾಕ್ ನಂತರ ಕಾಣಿಸಿಕೊಳ್ಳುತ್ತವೆ ಎಂದು ವರದಿ ಹೇಳಿದೆ.
ಪ್ರಮುಖ ವಲಯಗಳ ಮೇಲೆ ಕೊರೊನಾ ಪರಿಣಾಮ:
ಶೈಕ್ಷಣಿಕ ಸೇವಾ ಸಂಸ್ಥೆಗಳು: ಶೇ.86ರಷ್ಟು ಬಡ ಮಕ್ಕಳಿಗೆ ಅಂತರ್ಜಾಲ ಸೌಲಭ್ಯವಿಲ್ಲದ ಕಾರಣ, ಆನ್ಲೈನ್ ಶಿಕ್ಷಣ ಸಾಧ್ಯವಾಗುತ್ತಿಲ್ಲ. ನಗರದ ಮಧ್ಯಮ ಹಾಗೂ ಮೇಲ್ವರ್ಗದ ಜನರ ಮೇಲೆ ಆನ್ಲೈನ್ ಶಿಕ್ಷಣ ಶೇ 25%ರಷ್ಟು ಏರಿಕೆ ಕಂಡಿದೆ. ಇನ್ನು ಈ ವಲಯದಲ್ಲಿ ಉದ್ಯೋಗಾವಕಾಶ ಸುಧಾರಣೆಗೆ ಇನ್ನು 6 ತಿಂಗಳು ಬೇಕು.
ಇ ಕಾಮರ್ಸ್ ಹಾಗೂ ತಂತ್ರಜ್ಞಾನ ಸ್ಟಾರ್ಟ್ ಅಪ್: ಐದರಲ್ಲಿ ಎರಡು ಅಗತ್ಯ ಸೇವೆ ಹೊರೆತುಪಡಿಸಿದ ಇ ಕಾಮರ್ಸ್ ಸಂಸ್ಥೆಗಳು ಮಾರುಕಟ್ಟೆಯ ಬಗ್ಗೆ ನಕಾರಾತ್ಮಕ ನೋಟ ಹೊಂದಿದ್ದಾರೆ. ಶೇ.60% ಬಿ2ಸಿ ಸ್ಟಾರ್ಟ್ ಅಪ್ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ. ಆದರೆ, ಬರುವ ದಿನಗಳಲ್ಲಿ ಶೇ.19.6 ಏರಿಕೆಯನ್ನು ಈ ವಲಯ ನೋಡಲಿದೆ. ಈ ವಲಯದಲ್ಲಿ ಉದ್ಯೋಗಾವಕಾಶಕ್ಕೆ ಇನ್ನೂ 6 ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ.
ಅಗತ್ಯ ವಸ್ತುಗಳ ಚಿಲ್ಲರೆ ಅಂಗಡಿಗಳು: ರಿಟೈಲ್ ವಲಯ 2 ಲಕ್ಷ ಕೋಟಿ ಮಾರಾಟವನ್ನು ಕಳೆದುಕೊಂಡಿದೆ. 26 ಲಕ್ಷ ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ವಲಯ ಹೆಚ್ಚು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತಿದೆ. ಈ ವಲಯದಲ್ಲಿ ಉದ್ಯೋಗಾವಕಾಶ ಸುಧಾರಣೆಗೆ 9 ತಿಂಗಳಿಗಿಂತ ಹೆಚ್ಚಿಗೆ ಸಮಯ ತೆಗೆದುಕೊಳ್ಳಬಹುದು.
ಲಾಜಿಸ್ಟಿಕ್ಸ್: ದೇಶದಲ್ಲಿ ಶೇ.65ರಷ್ಟು ಟ್ರಕ್ಗಳು ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತವಾಗಿತ್ತು.10 ಲಕ್ಷಕ್ಕೂ ಹೆಚ್ಚಿನ ಟ್ರಕ್ ಚಾಲಕರು ಕೆಲಸ ಕಳೆದುಕೊಂಡಿದ್ದಾರೆ. ಶೇ.50% ಟ್ರಕ್ಗಳಿಗೆ ಈಗ ಚಾಲಕರು ಇಲ್ಲ. ಈ ವಲಯ 12-13% ಇಳಿಕೆ ಕಾಣಲಿದೆ. ಇಲ್ಲಿನ ಉದ್ಯೋಗಾವಕಾಶ ಸುಧಾರಣೆಗೆ 1 ವರ್ಷಕ್ಕೂ ಹೆಚ್ಚಿನ ಸಮಯ ಬೇಕಾಗಿದೆ.
ಎಫ್ಎಂಸಿಡಿ: ಬಹುತೇಕ ಎಲೆಕ್ಟ್ರಾನಿಕ್ ಉಪಕರಣ, ನಿತ್ಯ ಬಳಿಕೆ ವಸ್ತುಗಳ ಒಳಗೊಳ್ಳುವ ಈ ವಲಯ ಅತಿ ಹೆಚ್ಚು ಹೊಡೆತ ಆರ್ಥಿಕವಾಗಿ ಕಂಡಿದೆ. ಬಹುತೇಕ ಆಮದು ಆಗುವ ವಸ್ತುಗಳ ಸಮಸ್ಯೆಯಿಂದ ಈಗ ನಲುಗಿದೆ. ಕೆಲಸ ಕಳೆದುಕೊಳ್ಳುವ ಪ್ರಮಾಣ ಅತಿ ಹೆಚ್ಚು ಆಗಿದ್ದು, ಸುಧಾರಣೆಗೆ ವರ್ಷಕ್ಕೂ ಅಧಿಕ ಸಮಯ ಬೇಕಿದೆ.
ರಿಯಲ್ ಎಸ್ಟೇಟ್: ಹೂಡಿಕೆ ಪ್ರಮಾಣದಲ್ಲಿ ಶೇ.30%ರಷ್ಟು ಇಳಿಮುಖವಾಗಿದೆ. ನಿರುದ್ಯೋಗ ಸಮಸ್ಯೆ ಹಾಗೂ ಇನ್ನಿತರೆ ಕೊರೊನಾ ಸಂಬಂಧಿಸಿದ ಭಾವನೆಗಳಿಂದ ಫೆಬ್ರುವರಿ ತಿಂಗಳಿಂದ ಶೇ.25%ರಷ್ಟು ಉದ್ಯೋಗ ನಷ್ಟವಾಗಿದೆ. ಸುಧಾರಣೆಗೆ ವರ್ಷಕ್ಕೂ ಅಧಿಕ ಸಮಯ ಬೇಕಿದೆ.
ಪ್ರವಾಸೋದ್ಯಮ: ಇದು ಕೊರೊನಾದಿಂದ ಅತಿ ಹೆಚ್ಚು ಬಾಧಿತ ವಲಯ ಎಂದರೆ ತಪ್ಪಾಗಲಾರದು. 5 ಕೋಟಿ ಜನರ ಉದ್ಯೋಗ ತೂಗುಗತ್ತಿಯ ಮೇಲಿದೆ. ಪ್ರವಾಸೋದ್ಯಮದಿಂದ ಬರುತ್ತಿದ್ದ ಆದಾಯದಲ್ಲಿ ಶೇ.30%ರಷ್ಟು ಇಳಿಕೆ ಆಗಿದೆ. ಸುಧಾರಣೆಗೆ ವರ್ಷಕ್ಕೂ ಅಧಿಕ ಸಮಯ ಬೇಕಿದೆ. ಇದು ಕೆಲ ವಲಯಗಳ ಚಿತ್ರಣವಾಗಿದ್ದು, ಆರೋಗ್ಯ ಸೇವೆ, ಶೈಕ್ಷಣಿಕ ಸ್ಟಾರ್ಟ್ ಅಪ್ಗಳು ಹಾಗೂ ಟೆಲಿ ಕಮ್ಯುನಿಕೇಶನ್ ಸಂಸ್ಥೆಗಳು ಲಾಭಾಂಶ ನೋಡುತ್ತಿದೆ.