ಬೆಂಗಳೂರು:ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಮನೆಯವರಿಗೆ ತನ್ನ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಸ್ಮರಿಸಿಕೊಂಡ ಅವರು, ನೆಟ್ಟಾರು ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರವೀಣ್ ನೆಟ್ಟಾರು ಜೊತೆಗೆ ಇತ್ತೀಚೆಗಷ್ಟೇ ನಿಧನ ಹೊಂದಿದ ಉಮೇಶ್ ಕತ್ತಿ ಅವರನ್ನು ಸ್ಮರಣೆ ಮಾಡಲಾಯಿತು. ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಬಿಜೆಪಿ ಸಂಪ್ರದಾಯ ಬದಿಗೊತ್ತಿ ಭಾರತ ಮಾತೆ ಮತ್ತು ಬಿಜೆಪಿ ಸ್ಥಾಪಕರ ಭಾವಚಿತ್ರಗಳಿಗೂ ಮುಂದೆ ಕತ್ತಿ ಮತ್ತು ನೆಟ್ಟಾರು ಭಾವಚಿತ್ರಗಳನ್ನು ಇರಿಸಿ ಗೌರವ ಸಲ್ಲಿಕೆ ಮಾಡಲಾಯಿತು. ಪುಷ್ಪಾರ್ಚನೆ ಸಹ ಮಾಡಲಾಯಿತು. ಸಂಭ್ರಮಾಚರಣೆಗೂ ಮುನ್ನ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.
ನೆಟ್ಟಾರು ಹತ್ಯೆಯಿಂದಾಗಿ ಕಾರ್ಯಕರ್ತರಲ್ಲಿ ವ್ಯಕ್ತವಾದ ಆಕ್ರೋಶದ ಕಾರಣದಿಂದಾಗಿಯೇ ಮೊದಲ ಬಾರಿ ಜನೋತ್ಸವ ರದ್ದುಗೊಂಡಿತ್ತು. ಕಾರ್ಯಕರ್ತರ ಸಮಾಧಾನಪಡಿಸಲು ರಾಜ್ಯ ನಾಯಕರು ಸಾಕಷ್ಟು ಹರಸಾಹಸ ಪಡಬೇಕಾಯಿತು. ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆಯದಿರಲಿ ಎನ್ನುವ ಕಾರಣಕ್ಕೆ ನೆಟ್ಟಾರು ಭಾವಚಿತ್ರವನ್ನು ಅಲ್ಲಿ ನೆರೆದಿದ್ದ ಇಡೀ ಕಾರ್ಯಕರ್ತ ಸಮೂಹಕ್ಕೆ ಕಾಣಿಸುವಂತೆ ಮುಂಭಾಗದಲ್ಲಿಯೇ ಇಡಲಾಗಿತ್ತು. ಇನ್ನು ಉಮೇಶ್ ಕತ್ತಿ ನಿಧನದ ನಡುವೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರಿಗೂ ಸಂತಾಪ ಸೂಚಿಸಿ, ಅವರನ್ನು ಸ್ಮರಿಸುವ ಕೆಲಸ ಮಾಡಲಾಯಿತು.
ಇದನ್ನೂ ಓದಿ:ಬಿಟ್ಟಿ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ: ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿ