ಬೆಂಗಳೂರು:ದೆಹಲಿ ಜೆಎನ್ಯುನಲ್ಲಿರುವ ಕನ್ನಡ ಅಧ್ಯಯನ ಪೀಠ ರದ್ದು ಮಾಡುವ ವಿಚಾರ ಸತ್ಯಕ್ಕೆ ದೂರವಾದ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ, ಜೆಎನ್ಯುನಲ್ಲಿ ಕನ್ನಡ ಅಧ್ಯಯನ ಪೀಠ ರದ್ದಾಗಲಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ಅದು ಸತ್ಯಕ್ಕೆ ದೂರವಾದ ವಿಚಾರ. ಕಳೆದ ನವೆಂಬರ್ನಲ್ಲೇ ಜೆಎನ್ಯು ಉಪಕುಲಪತಿಗೆ ಪತ್ರ ಬರೆಯಲಾಗಿದೆ. ಕನ್ನಡ ಅಧ್ಯಯನ ಪೀಠಕ್ಕೆ ಮುಖ್ಯಸ್ಥರನ್ನು ನೇಮಿಸಲು ಶೋಧನಾ ಸಮಿತಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸದ್ಯ ಶೋಧನಾ ಸಮಿತಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶೋಧನಾ ಸಮಿತಿ ನೀಡುವ ವರದಿ ಆಧರಿಸಿ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಇದರ ಜೊತೆ ಕಳೆದ ಐದು ವರ್ಷದಲ್ಲಿ ಅಧ್ಯಯನ ಪೀಠದಲ್ಲಿ ಏನೆಲ್ಲಾ ಚಟುವಟಿಕೆ ನಡೆದಿದೆ. ಎಷ್ಟು ಮಂದಿ ದೇಶ, ವಿದೇಶಿಯರು ಪೀಠದಿಂದ ಅನುಕೂಲ ಪಡೆದಿದ್ದಾರೆ ಎಂಬುವುದರ ಬಗ್ಗೆಯೂ ವರದಿ ಪಡೆಯುತ್ತೇವೆ ಎಂದರು.
2015ರಲ್ಲಿ ಜೆಎನ್ಯುನಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲಾಗಿತ್ತು. ಪುರುಷೋತ್ತಮ ಬಿಳಿಮಲೆ ಕನ್ನಡ ಅಧ್ಯಯನ ಪೀಠ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆಗಸ್ಟ್ 20 ಕ್ಕೆ ನಿವೃತ್ತಿಯಾಗಲಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಪತ್ರ ಬರೆದಿದ್ದರೂ ವಿಶ್ವವಿದ್ಯಾಲಯ ಇನ್ನೂ ಕನ್ನಡ ಅಧ್ಯಯನ ಪೀಠಕ್ಕೆ ಹೊಸ ಮುಖ್ಯಸ್ಥರನ್ನು ನೇಮಿಸಿಲ್ಲ.