ಬೆಂಗಳೂರು :ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ಬೈಕ್ನಲ್ಲಿ ಬಂದಾಗ ಉಂಟಾದ ಜಗಳದಲ್ಲಿ ಚಂದ್ರು ಎಂಬಾತನನ್ನ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಚಂದ್ರು ಕೊಲೆ ಪ್ರಕರಣದ ಕುರಿತಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿರುವುದು.. ವಾಹನ ತಗುಲಿದ್ದಕ್ಕೆ ಕೊಲೆ : ಸ್ನೇಹಿತ ಸೈಮನ್ ರಾಜ್ ಹುಟ್ಟುಹಬ್ಬ ಪ್ರಯುಕ್ತ ಛಲವಾದಿಪಾಳ್ಯದಿಂದ ಹೊಸಗುಡ್ಡದಹಳ್ಳಿ ಕಡೆ ಮೊನ್ನೆ ರಾತ್ರಿ ಊಟಕ್ಕಾಗಿ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಹೋಗುವಾಗ ಆರೋಪಿಗಳ ಬೈಕ್ಗೆ ಬೈಕ್ ಟಚ್ ಆಗಿತ್ತು. ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ನೋಡು ನೋಡುತ್ತಿದ್ದಂತೆ ಆರೋಪಿಗಳು ಚಂದ್ರುವಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಜೆ.ಜೆ.ನಗರ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಮಲ್ ಪಂತ್ ಟ್ವೀಟ್ :ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, 'ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ. 5ರ ಮಧ್ಯರಾತ್ರಿ (ನಡೆದ ಕೊಲೆ ಪ್ರಕರಣ ಸಂಬಂಧ ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿದ ವಿಷಯವು ಗಲಾಟೆಗೆ ಕಾರಣವಾಗಿದ್ದು, ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ.
ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ, ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ' ಎಂದು ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಜೆಜೆನಗರ ಯುವಕ ಕೊಲೆ ಪ್ರಕರಣ ಸಂಬಂಧ ಸೈಮನ್ ರಾಜ್ ಮತ್ತು ಚಂದ್ರು ಊಟಕ್ಕೆ ಹೋಗಿದ್ದರು. ಈ ವೇಳೆ ಸಾಹಿದ್ ಗಾಡಿಗೆ ಟಚ್ ಆಗಿ ವಾಗ್ವಾದ ನಡೆದಿದೆ. ಈ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿದೆ. ಪೊಲೀಸರ ತನಿಖೆಯಲ್ಲಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಭಾಷೆ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.