ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಜೆಸ್ಕಾಂನಲ್ಲಿ ವಿದ್ಯುತ್ ಮಾಪಕ, ಪೋಲ್ ಹಾಗು ವೈರ್ ಮತ್ತಿತರ ಸಲಕರಣೆ ದಾಸ್ತಾನು ಅಭಾವದಿಂದ ಗುತ್ತಿಗೆದಾರರು ಕೆಲಸವಿಲ್ಲದೇ ಖಾಲಿ ಉಳಿಯಬೇಕಾಗಿದೆ. ನಾಲ್ಕೈದು ತಿಂಗಳಿಂದ ವಿದ್ಯುತ್ ಮಾಪಕ, ವೈಯರ್ ದಾಸ್ತಾನು ಕೊರತೆಯಿಂದ ಮನೆ, ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೆಸ್ಕಾಂ ನಂಬಿ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.
ಜೆಸ್ಕಾಂ ನಿರ್ಲಕ್ಷ್ಯ ವಹಿಸಿದ್ದರಿಂದ ವಿದ್ಯುತ್ ಸಲಕರಣೆ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿದ್ಯುತ್ ಸಲಕರಣೆಗಳ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಸುಮಾರು ಹತ್ತು ಸಾವಿರ ಕುಟುಂಬಗಳು ಉಚಿತ ಗೃಹ ಜ್ಯೋತಿ ಯೋಜನೆಯಿಂದ ಹೊರಗೆ ಉಳಿಯಬೇಕಾಗಿದೆ ಎಂದು ಜೆಸ್ಕಾಂ ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಸ್ಕಾಂ ವಿರುದ್ಧ ದೂರು: ನೂತನ ಮನೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಾರಣ ಗುತ್ತಿಗೆದಾರರನ್ನು ನಂಬಿ ಬದುಕು ಸಾಗಿಸುವ ಅವರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಅಲ್ಲದೇ ಹೊಸ ಗ್ರಾಹಕರು ಹಾಗೂ ಜೆಸ್ಕಾಂ ಕಾಂಟ್ರಾಕ್ಟರ್ಸ್ ನಡುವೆ ಜಗಳ, ಕಿರಿಕಿರಿ ಉಂಟಾಗುತ್ತಿದೆಯಂತೆ. ಹೀಗಾಗಿ ವಿದ್ಯುತ್ ಮಾಪಕಗಳ ಕೊರತೆ ಅಭಾವ ಹಿನ್ನೆಲೆಯಲ್ಲಿ ಗುತ್ತಿಗೆದಾರರು, ಫಲಾನುಭವಿಗಳು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.