ಬೆಂಗಳೂರು: 45 ದಿನಗಳ ಕಾಲ ರಾಜ್ಯದ್ಯಂತ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಮೂರು ಹಂತದ ಕಾಲ್ನಡಿಗೆ ಯಶಸ್ವಿಯಾಗಿ ಪೂರ್ಣವಾಗಿದ್ದು, ರಾಜ್ಯ ರಾಜಧಾನಿಯಲ್ಲೂ ಐದು ದಿನಗಳ ಕಾಲ ಪಾದಯಾತ್ರೆ ನಡೆಸುವುದಾಗಿ ಜನತಾದಳ (ಸಂಯುಕ್ತ) ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಾರದಿಂದ ಪ್ರಾರಂಭವಾಗಿ ಬೆಂಗಳೂರಿನವರೆಗೆ, ದಾವಣಗೆರೆಯ (ಜೆ.ಹೆಚ್.ಪಟೇಲ್‌ರ ಪುಣ್ಯಭೂಮಿ) ಕಾರಿಗನೂರುನಿಂದ ಪ್ರಾರಂಭವಾಗಿ ಕೂಡಲಸಂಗಮದವರೆಗೆ ಸುಮಾರು 650ಕ್ಕೂ ಹೆಚ್ಚು ಕಿ.ಮೀ. ದೂರವನ್ನು ಕ್ರಮಿಸಿದ್ದಾಗಿದೆ.
ಇದೀಗ ಬೆಂಗಳೂರು ಮಹಾನಗರ ಪಾದಯಾತ್ರೆಯನ್ನು 45 ದಿನಗಳ ಕಾಲ ನಿಗದಿಪಡಿಸಿದ್ದು, ಇದರ ಮೊದಲ ಹಂತಕ್ಕೆ ನಾಳೆ ಬೆಳಗ್ಗೆ 10 ಗಂಟೆಗೆ ನಗರ ದೇವತೆ ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿ ದೇವಸ್ಥಾನದಿಂದ ಪ್ರಾರಂಭವಾಗಿ ಐದು ದಿನಗಳ ಪಾದಯಾತ್ರೆಯನ್ನು ನಡೆಸಲಿದ್ದೇವೆ. ಬೆಂಗಳೂರು ನಗರ ಜನತೆಯ ಮನಃ ಪರಿವರ್ತನಾ ಉದ್ದೇಶದಿಂದ ಕೂಡಿದ ಪಾದಯಾತ್ರೆ ಇದಾಗಿದೆ ಎಂದರು.