ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಬರುತ್ತದೆಯೇ ಹೊರತು ಕಡಿಮೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ, ಕಾಂಗ್ರೆಸ್ ಗೆ 130 ಸೀಟು ಬರುತ್ತವೆ ಎಂಬ ಆಂತರಿಕ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಪ್ಲಾಂಟೆಡ್ ಸಮೀಕ್ಷೆ. ಅವರ ಶಕ್ತಿ ಇರುವುದು ಕೇವಲ 60 ರಿಂದ 65 ಸೀಟು ಎಂದು ಹೇಳಿದರು.
2023ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಗಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ಕುಮಾರಸ್ವಾಮಿ 2013 ರಲ್ಲಿ ಯಡಿಯೂರಪ್ಪನವರು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅವರು ಯಡಿಯೂರಪ್ಪನವರನ್ನು ನೆನಪಿಸಿಕೊಳ್ಳಬೇಕು. ಅಂದು ಅಧಿಕಾರದಲ್ಲಿದ್ದ ಪಕ್ಷ ನಂತರ 78 ಕ್ಕೆ ಇಳಿದಿತ್ತು. ಇವತ್ತು ಹೇಳುತ್ತಿದ್ದೇನೆ, ಕಾಂಗ್ರೆಸ್ ಪಕ್ಷ 70 ಸೀಟು ದಾಟಲ್ಲ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ಜನತೆಯ ಮತ್ತು ದೇವರ ಆಶೀರ್ವಾದ ಇದೆ. ನಾನು ಒಂದು ಚಾಲೆಂಜ್ ಮಾಡುತ್ತೇನೆ. ನಮ್ಮ ಪಕ್ಷ ಈ ಎರಡು ರಾಷ್ಟ್ರಿಯ ಪಕ್ಷಗಳಿಗಿಂತ ಮೇಲಿರುತ್ತದೆಯೇ ಹೊರತು ಕೆಳಗಿರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರಗಳ ವೈಫಲ್ಯದಿಂದ ಇಂದು ಬೆಂಗಳೂರಿಗೆ ಸಮಸ್ಯೆ ಆಗಿದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 2008 ರಿಂದ 2013 ರವರೆಗೂ ಅಧಿಕಾರ ನಡೆಸಿದ್ದು ಬಿಜೆಪಿ ಸರ್ಕಾರ. ಆಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದೆ. ನಾನು 14 ತಿಂಗಳು ಮೈತ್ರಿ ಸರ್ಕಾರದಲ್ಲಿದ್ದೆ. 2008 ರಲ್ಲಿ ಔಟರ್ ಪೆರಿಪರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದು ನಾನು. ಇನ್ನರ್ ರಿಂಗ್ ರೋಡ್‌ಗೆ ಅನುದಾನ ನೀಡಿದ್ದೆ. ಇವೆಲ್ಲವೂ ನೆನೆಗುದಿಗೆ ಬಿದ್ದಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಬೆಂಗಳೂರು ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ :ಮೈತ್ರಿ ಸರ್ಕಾರ ಅವಧಿಯಲ್ಲಿ ಪಿಆರ್ ಆರ್ ಯೋಜನೆಯನ್ನು ಜಾರಿ ಮಾಡಿದ್ದೆ. ಐದು ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಲು ಮುಂದಾಗಿದ್ದೆ. ಕೊನೆ ಹಂತದವರೆಗೆ ಯೋಜನೆ ತಂದು ನಿಲ್ಲಿಸಿದ್ದೆ. ಟನಲ್ ರೋಡ್ ಗೆ ಅಡಿಪಾಯ ಹಾಕಿದ್ದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 9 ಸಾವಿರ ಕೋಟಿ ರೂ. ನೀಡಬೇಕು. ಆದರೆ, ಇವರು 4 ಸಾವಿರ ಕೋಟಿ ರೂ.ಗೆ ತಂದು ನಿಲ್ಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಂದ ಬೆಂಗಳೂರು ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ ಎಂದು ಅವರು ಆರೋಪಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಲೂಟಿ: ಬಿಬಿಎಂಪಿ ಕಚೇರಿಯಲ್ಲಿ ದಾಖಲೆಗೆ ಬೆಂಕಿ ಇಟ್ಟವರು ಯಾರು? ಅದಕ್ಕೆ ಸಿಎಂ ಉತ್ತರ ಕೊಡ್ತಾರಾ ? ಎಂದು ಪ್ರಶ್ನಿಸಿದ ಹೆಚ್ ಡಿಕೆ, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೆಂಟರ್ ಅನ್ನು ನಾನು ಸಿಎಂ ಆಗಿರುವಾಗಲೇ ಮಾಡಿದ್ದೆ. ಈಗ ಅದಕ್ಕೆ ಸುಣ್ಣ ಬಣ್ಣ ಹೊಡೆದು ಚಾಲನೆ ನೀಡಿದ್ದಾರೆ. ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಎರಡು ಪಕ್ಷಗಳು ಕಾರಣ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಇದೆ ಎಂದು ಕಿಡಿಕಾರಿದರು.
ಜನತಾಮಿತ್ರ ಕರಪತ್ರ ಬಿಡುಗಡೆ: ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬೆಂಗಳೂರಿಗೆ ಮಾಡಿರುವ ಯೋಜನೆಗಳ ಕುರಿತ ಜನತಾಮಿತ್ರ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು. ನಿನ್ನೆ 15 ಜನತಾ ಮಿತ್ರ ವಾಹನಗಳಿಗೆ ಚಾಲನೆ ನೀಡಿದ್ದೇವೆ. ಈಗ ಕರಪತ್ರಗಳ ದಾಖಲೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ದೇವೇಗೌಡರು ಹಾಗೂ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಜನರ ಮುಂದಿಡುತ್ತೇವೆ. ಮನೆ ಮನೆಗಳಿಗೆ ಕರಪತ್ರಗಳನ್ನು ಹಂಚಲು ತೀರ್ಮಾನ ಮಾಡಲಾಗಿದೆ. ಜೊತೆಗೆ 15 ದಿನ ಸುಮಾರು 70 ರಿಂದ 80 ಪಕ್ಷದ ಸಭೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.
ಓದಿ :ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್-ಬಿಜೆಪಿಗೆ ಇಬ್ರಾಹಿಂ ಸವಾಲು