ಕರ್ನಾಟಕ

karnataka

ಮಸ್ಕಿ, ಬೆಳಗಾವಿ ಉಪಚುನಾವಣೆ ಕಣದಿಂದ ಜೆಡಿಎಸ್ ಹಿಂದೆ ಸರಿದಿದ್ದೇಕೆ!?

2018ರಲ್ಲಿ ಜೆಡಿಎಸ್​​ನಿಂದ ರಾಜಾ ಸೋಮನಾಥ ನಾಯಕ ಸ್ಪರ್ಧಿಸಿದ್ದರು. ಅವರು ಅಂತಹ ಗಮನಾರ್ಹ ಮತಗಳಿಸಿಲ್ಲ. ಸಿಂಧನೂರಿನಲ್ಲಿ ವೆಂಕಟರಾವ್ ನಾಡಗೌಡ, ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿ ಆಯ್ಕೆಯಾಗಿದ್ದಾರೆ..

By

Published : Mar 27, 2021, 7:31 PM IST

Published : Mar 27, 2021, 7:31 PM IST

JDS will not Contest Maski and Belgavi By election
ಮಸ್ಕಿ, ಬೆಳಗಾವಿ ಉಪ ಚುನಾವಣೆ ಕಣದಿಂದ ಹಿಂದೆ ಸರಿದ ಜೆಡಿಎಸ್

ಬೆಂಗಳೂರು :ಉಪ ಚುನಾವಣೆಗಳಲ್ಲಿ ಜೆಡಿಎಸ್​​ಗೆ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೇ ಉಪಚುನಾವಣೆಗಳಲ್ಲಿ ಜೆಡಿಎಸ್ ಗೆದ್ದಿರುವ ನಿದರ್ಶನ ಕಡಿಮೆ. ಪ್ರಭಾವಿ ಅಭ್ಯರ್ಥಿಗಳ ಕೊರತೆ ಹಾಗೂ ಹಣದ ಸಮಸ್ಯೆಯಿಂದಾಗಿ ಉಪಚುನಾವಣಾ ಕಣದಿಂದ ಜೆಡಿಎಸ್ ಹಿಂದೆ ಸರಿದಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಉಪಚುನಾವಣೆಗಳು ಅಧಿಕಾರಸ್ಥರ, ದುಡ್ಡಿರುವವರ ಚುನಾವಣೆಗಳು. ಈ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ಪ್ರತಿಷ್ಠೆಯ ಈ ಹೋರಾಟದಲ್ಲಿ ಸ್ಪರ್ಧಿಸದೇ ಇರುವುದು ಒಳಿತು ಎಂದು ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು.

ಶಿರಾ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಗಳು ಸೇರಿ ಇತ್ತೀಚಿನ ಬಹುತೇಕ ಚುನಾವಣೆಗಳಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದರಿಂದ ಜೆಡಿಎಸ್ ತಟಸ್ಥವಾಗಿತ್ತು.

ಈ ಬಾರಿಯ ಉಪಚುನಾವಣೆಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಚುನಾವಣೆಗೆ ನಮ್ಮ ಹತ್ತಿರ ಹಣ ಇಲ್ಲ. ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠರು ಹೇಳಿದ್ದರಾದರೂ, ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆ ಬಸವಕಲ್ಯಾಣ ಕ್ಷೇತ್ರದಿಂದ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿದೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಕಣಕ್ಕಿಳಿಯದಿರುವುದು ಆಡಳಿರೂಢ ಬಿಜೆಪಿಗೆ ಅನುಕೂಲವೇ ಆಗಲಿದೆ. ವಿಧಾನ ಪರಿಷತ್​​ನಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ತಿರುವು ನೀಡಿತ್ತು.

ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟು ಕೊಟ್ಟಿದೆ. ಇದೀಗ ಜೆಡಿಎಸ್ ಈ ಉಪಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸಿ ಸಭಾಪತಿ ಋಣ ತೀರಿಸುವ ಲೆಕ್ಕಾಚಾರವೇ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಓದಿ:ಉಪಚುನಾವಣೆಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಕಣಕ್ಕೆ: ಹೆಚ್​ಡಿಕೆ

ಮಸ್ಕಿಯಲ್ಲಿ ಈವರೆಗೂ ಜೆಡಿಎಸ್‌ ಖಾತೆ ತೆರೆದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಲವಾಗಿರುವುದರಿಂದ ಇಬ್ಬರ ನಡುವಿನ ಜಗಳ 3ನೇ ವ್ಯಕ್ತಿಗೆ ಲಾಭ ಸಿಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಕಣದಿಂದ ಹಿಂದೆ ಸರಿದಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುತ್ತಾ ಬಂದಿದೆ. ಆದರೆ, ಜೆಡಿಎಸ್ ಒಂದೂ ಸ್ಥಾನ ಗೆದ್ದಿಲ್ಲ. ಈ ಹಿನ್ನೆಲೆ ಮಸ್ಕಿ ಉಪ ಚುನಾವಣೆಗೆ ಜೆಡಿಎಸ್ ನಿರಾಸಕ್ತಿ ವಹಿಸಿದೆ ಎನ್ನಲಾಗಿದೆ.

2018ರಲ್ಲಿ ಜೆಡಿಎಸ್​​ನಿಂದ ರಾಜಾ ಸೋಮನಾಥ ನಾಯಕ ಸ್ಪರ್ಧಿಸಿದ್ದರು. ಅವರು ಅಂತಹ ಗಮನಾರ್ಹ ಮತಗಳಿಸಿಲ್ಲ. ಸಿಂಧನೂರಿನಲ್ಲಿ ವೆಂಕಟರಾವ್ ನಾಡಗೌಡ, ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿಯ ಉಪ ಚುನಾವಣೆಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತಿಲ್ಲ. ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಕಳೆದ ತಿಂಗಳು ರಾಯಚೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು. ಇದಾದ ನಂತರ ಅಭ್ಯರ್ಥಿ ಕಣಕ್ಕಿಳಿಸದ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಆಗ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಟ್ವೀಟ್ ವಾರ್ ಸಹ ನಡೆದಿತ್ತು.

ಜೆಡಿಎಸ್ ಚುನಾವಣೆ ಕಣದಿಂದ ಹಿಂದೆ ಸರಿಯುವುದನ್ನು ಗೇಲಿ ಮಾಡುವ ಮುನ್ನ ಸಿದ್ದರಾಮಯ್ಯರಿಗೆ ಗುಂಡ್ಲುಪೇಟೆ, ನಂಜನಗೂಡು ನೆನಪಾಗಬೇಕಿತ್ತು? ಅಂದು ದೇವೇಗೌಡರು ಜಾತ್ಯಾತೀತ ನಿಲುವಿಗೆ ಕಟ್ಟುಬಿದ್ದು ಕಾಂಗ್ರೆಸ್ ಬೆಂಬಲಿಸಿದ್ದರು.

ಆ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸಾಕಷ್ಟು ಬಲವಿತ್ತು ಎಂದು ತಿರುಗೇಟು ನೀಡಿದ್ದರು. ಹಾಗೆಯೇ ಬಸವಕಲ್ಯಾಣದಲ್ಲಿ ಜೆಡಿಎಸ್‌, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು 'ಮಹಾನ್‌ ನಾಯಕ'ರು ಹೇಳಿದ್ದಾರೆ.

ಓದಿ:ಪ್ರಭಾವಿ ಅಭ್ಯರ್ಥಿಯ ಕೊರತೆ: ಮಸ್ಕಿ ಉಪಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್

ಪ್ರತಿಯೊಂದಕ್ಕೂ ಒಳ ಒಪ್ಪಂದ, ಒಳಸಂಚು ಮಾಡಿದವರಿಗಷ್ಟೇ ಒಳ ಒಪ್ಪಂದದ ಕನವರಿಕೆ. ಆಪರೇಷನ್‌ ಕಮಲದಲ್ಲಿ, ಮೈತ್ರಿ ಸರ್ಕಾರ ಉರುಳಿದ್ದರಲ್ಲಿ ಅಂತಹ ಒಳ ಒಪ್ಪಂದಗಳು ಈಗಾಗಲೇ ಬಯಲಾಗಿವೆ. ಜೆಡಿಎಸ್‌ಗೆ ಇಂತಹ ದುರ್ಬುದ್ಧಿ ಇಲ್ಲ ಎಂದು ಹೆಚ್​​ಡಿಕೆ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ABOUT THE AUTHOR

...view details