ಕರ್ನಾಟಕ

karnataka

ಜಂಟಿ ಅಧಿವೇಶನದಲ್ಲಿ ಆಡಳಿತ ಪಕ್ಷ ಬಿಜೆಪಿ- ಪ್ರತಿಪಕ್ಷ ಕಾಂಗ್ರೆಸ್ ಮೇಲಾಟದಲ್ಲಿ ಮಂಕಾಯಿತೆ ಜೆಡಿಎಸ್‍?

By

Published : Feb 19, 2022, 10:04 PM IST

ಜಂಟಿ ಅಧಿವೇಶನದಲ್ಲಿ ಸಚಿವ ಈಶ್ವರಪ್ಪನವರ ಹೇಳಿಕೆಯನ್ನೇ ದೊಡ್ಡ ವಿವಾದವಾಗಿ ಮಾಡಿ ಕಾಂಗ್ರೆಸ್​ ನಾಯಕರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಜೆಡಿಎಸ್ ಪಕ್ಷವು ಜನರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಬೇಕಿಂದ್ದರು. ಆದರೀಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಚಟುವಟಿಕೆಯಿಂದ ಜೆಡಿಎಸ್​​​ ಬೇಸತ್ತಿದೆ..

JDS upset about BJP -Congress activities in join session
ಬಿಜೆಪಿ- ಕಾಂಗ್ರೆಸ್ ಚಟುವಟಿಕೆಯಿಂದ ಜೆಡಿಎಸ್​ ಬೇಸರ

ಬೆಂಗಳೂರು :ಕಳೆದ ಮೂರು ದಿನಗಳು ವಿಧಾನಮಂಡಲ ಕಲಾಪ 'ರಾಜಕೀಯ ಪ್ರತಿಷ್ಠೆ'ಗೆ ಆಹುತಿಯಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಯಬೇಕಿದ್ದ ಈ ಸದನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪಟ್ಟು ಹಿಡಿದಿರುವ ಪ್ರತಿಪಕ್ಷ ಕಾಂಗ್ರೆಸ್ ಧರಣಿ ನಡೆಸುತ್ತಿರುವುದರಿಂದ ಮೂರು ದಿನ ಕಲಾಪ ಬಲಿಯಾಗಿದೆ.

ಜಂಟಿ ಅಧಿವೇಶನ ಆರಂಭವಾದ ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಿದರು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಎರಡನೇ ದಿನ ಪ್ರಶ್ನೋತ್ತರ, ರಾಜ್ಯಪಾಲರ ಭಾಷಣದ ಬಿಜೆಪಿ ಶಾಸಕ ಪಿ.ರಾಜೀವ್, ಕುಮಾರ್ ಬಂಗಾರಪ್ಪ ಮಾತನಾಡಿದರು.

ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದನ್ನು ಖಂಡಿಸಿ ಫೆ. 16ರಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸದನದಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಿದರು.

ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಲುವಳಿ ಸೂಚನೆಯನ್ನು ತಳ್ಳಿ ಹಾಕಿದರು. ಹಾಗಾಗಿ, ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪಟ್ಟು ಹಿಡಿದು ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಇದರಿಂದಾಗಿ ಸುಗಮ ಕಲಾಪಕ್ಕೆ ಅಡ್ಡಿಯಾಗಿದೆ.

ಕಳೆದ ಮೂರು ದಿನಗಳಿಂದ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಟಾಕ್ ವಾರ್ ಜೋರಾಗಿಯೇ ಇತ್ತು. ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ, ಗದ್ದಲ ಉಂಟಾಗಿತ್ತು. ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳು ಮಾಡಿದ ಮನವಿ ವ್ಯರ್ಥವಾಯಿತು.

ಮೂಕ ಪ್ರೇಕ್ಷಕರಾದ ಜೆಡಿಎಸ್‍ ಸದಸ್ಯರು :ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವಿನ ಗದ್ದಲ, ಗಲಾಟೆಯಿಂದಾಗಿ ಜೆಡಿಎಸ್ ಸದಸ್ಯರು ಬರೀ ಪ್ರೇಕ್ಷಕರಾದರು. ಜೆಡಿಎಸ್‍ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಅವಕಾಶವೇ ಸಿಗಲಿಲ್ಲ. ರಾಜ್ಯದ ಪ್ರಗತಿಗೆ ಸಂಬಂಧಿಸಿದ ವಿಚಾರಗಳು, ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಆಗಿರುವ ಭ್ರಷ್ಟಾಚಾರ ಹಾಗೂ ಕಳಂಕಿತ ಅಧಿಕಾರಿಗಳ ರಕ್ಷಣೆ ಬಗ್ಗೆ ಪ್ರಸ್ತಾಪ ಮಾಡಲು ಜೆಡಿಎಸ್‍ ನಾಯಕರು ಸಿದ್ಧತೆ ಮಾಡಿಕೊಂಡಿದ್ದರು.

ಕೈಗಾರಿಕೆ, ಬಂಡವಾಳ ಹೂಡಿಕೆ ಹಾಗೂ ಪ್ರವಾಸೋದ್ಯಮ ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಗೊಂದಲ, ಅವ್ಯವಹಾರಕ್ಕೆ ಕಾರಣವಾದ ಐದು ವರ್ಷಗಳ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಸದನದಲ್ಲಿ ತೆರೆದಿಡಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸಜ್ಜಾಗಿದ್ದರು.

ಇದರ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಹಿತವನ್ನು ಕಡೆಗಣಿಸಿ ಹಿಜಾಬ್ ಮತ್ತು ಕೇಸರಿ ಶಾಲುಗಳ ಹಿಂದೆ ಬಿದ್ದು ಸಮಾಜದ ಶಾಂತಿಯನ್ನು ಕೆಡಿಸುತ್ತಿದೆ. ಜೆಡಿಎಸ್ ಪಕ್ಷವು ಜನರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳ ಬಗ್ಗೆ ಕಲಾಪದಲ್ಲಿ ಮಾತನಾಡಬೇಂದು ಕೊಂಡಿದ್ದರು. ಅಲ್ಲದೆ ಸರ್ಕಾರದ ಕೋವಿಡ್ ವೈಫಲ್ಯ, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿ ವಿಷಯಗಳ ಬಗ್ಗೆ ಪಕ್ಷವೂ ದೊಡ್ಡ ಮಟ್ಟದಲ್ಲಿ ದನಿ ಎತ್ತಲು ತಯಾರಿಯಾಗಿ ಬಂದಿದ್ದರು.

ಸೂಕ್ಷ್ಮ ವಿಚಾರಗಳನ್ನು ಶಿಕ್ಷಣದಲ್ಲಿ ತರುವ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವುದು ಹಾಗೂ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ನಡೆಸಿವೆ. ಈ ಬಗ್ಗೆ ಸದನದಲ್ಲಿ ಪಕ್ಷ ವಹಿಸಬೇಕಾದ ನಿಲುವಿನ ಬಗ್ಗೆ ಕೂಡ ಚರ್ಚೆ ನಡೆಸಲಾಗಿತ್ತು. ಎರಡು ದಿನ ಸದನಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ.

ಜನರು ಕಷ್ಟದಲ್ಲಿದ್ದಾರೆ. ಕೋವಿಡ್​​​​ನಿಂದ ಅವರ ಬದಕಿನ ಬವಣೆ ಹೆಚ್ಚಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್‌ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ ಎಂದು ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದು ಸೋಮವಾರಕ್ಕೆ ಕೊನೆಗೊಳ್ಳುವುದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಂದು ವೇಳೆ ಸೋಮವಾರ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟರೆ ಉಳಿದಿರುವ ನಾಲ್ಕು ದಿನಗಳಲ್ಲಿ ಜೆಡಿಎಸ್‍ ನಾಯಕರು ಹಲವು ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲಿದ್ದಾರೆ.

ಇದನ್ನೂ ಓದಿ: ಸೋಮವಾರ ಸಂಜೆಯವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ 'ಕೈ' ಶಾಸಕರಿಗೆ ವಿಪ್ ಜಾರಿ

ABOUT THE AUTHOR

...view details