ಬೆಂಗಳೂರು:ಹಿಂದೆ ಒಂದು ಮಾತಿತ್ತು. ‘ಕೈಲಾಗದವನು ಮೈ ಪರಚಿಕೊಂಡ’ ಅಂತಾ. ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, ‘ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ’ ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ ಎಂದು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.
ಕೊಟ್ಟ ಕುದುರೆ ಏರಿ, ಸವಾರಿಯನ್ನೂ ಮಾಡಿ, ಆಮೇಲೆ ನಮ್ಮ'ಕೈ'ಯಲ್ಲಿ ಏನೂ ಮಾಡಲಾಗಲಿಲ್ಲ ಎಂದರೆ ಹೇಗೆ?. ಅಂದರೆ, ಕೊಟ್ಟ ಕುದುರೆ ಏರಿ ಕೆಲಸ ಮಾಡದವರು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ! ಎಂದು ಕಿಡಿಕಾರಿದೆ.
ಮೇಕೆದಾಟು ಕನಸು ಕಂಡವರು 1995ರಲ್ಲಿ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡರು. ಆ ಯೋಜನೆಯ ಸಮಗ್ರ ಯೋಜನಾ ವರದಿ -DPR ಮಾಡಿ ಕೇಂದ್ರಕ್ಕೆ ಕಳುಹಿಸಿದ್ದು, 2018ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು.
2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳುಹಿಸಿದ್ದು ಕೇವಲ PFR ಮಾತ್ರ. ಬೆಂಗಳೂರಿನಲ್ಲೇ ಇದ್ದ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ PFR ಕೊಟ್ಟು ಕೈ ತೊಳೆದುಕೊಂಡ ಅವರ ಸರ್ಕಾರ, ಆ ಪ್ರಾದೇಶಿಕ ಕಚೇರಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಅದ ಮೇಲೆ ಪುನಃ PFR ಸಲ್ಲಿಸಿದ ಮೇಲೆ DPR ಸಲ್ಲಿಕೆಗೆ ಅವಕಾಶ ಸಿಕ್ಕಿತು. ಆಗ ಕುಮಾರಸ್ವಾಮಿ ಅವರ ಸರಕಾರ ತಡ ಮಾಡದೇ DPR ಸಿದ್ದಪಡಿಸಿ ಸಲ್ಲಿಸಿತು.
ಮೇಕೆದಾಟು ಡಿಪಿಆರ್ ಮಾಡಿದ್ದು ಯಾರು?
ಮೇಕೆದಾಟು ಯೋಜನೆಗೆ DPR ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ನಿನ್ನೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರೇ ದಾಖಲೆಗಳ ಸಮೇತ ಹೇಳಿದ್ದಾರೆ. ಐದು ವರ್ಷ ಸುಳ್ಳು ಸಿದ್ದಯ್ಯ ಮಾಡಿದ್ದೇನು ಇಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ ಎಂದು ಜೆಡಿಎಸ್ ಹೇಳಿದೆ.