ಬೆಂಗಳೂರು :ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಸಂಜೆ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಇದೆ. ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ನಡ್ಡಾ ಅವರ ಭೇಟಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ ಎಂದು ಜೆಡಿಎಸ್ ಹೇಳಿದೆ.
ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ. ಇದರ ನಂತರ ರಾಜ್ಯ ಬಿಜೆಪಿ ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸತ್ಯದ ತಲೆ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿಜೆಪಿಯು ಮಹಾರಾಷ್ಟ್ರದ ಪೇಶ್ವೆಗಳ ಹಿಡಿತದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಸರಿದೂಗಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿರಬೇಕು ಎಂದು ಟೀಕಿಸಿದೆ.
ಇದನ್ನೂ ಓದಿ :ಕಾಂಗ್ರೆಸ್ ಅತೀ ಭ್ರಷ್ಟ ಸರ್ಕಾರ ನೀಡಿತ್ತು, ತನಿಖೆಯಾಗದ ಎಲ್ಲಾ ಪ್ರಕರಣ ಲೋಕಾಯುಕ್ತಕ್ಕೆ ಶಿಫಾರಸು: ಸಿಎಂ ಘೋಷಣೆ
ಇದರ ಹಿಂದಿನ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೇ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ ಬಿಜೆಪಿಯನ್ನು ಬಿಡಿಸಿ, ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ ಸಜ್ಜಾಗುತ್ತಿದೆಯೇ? ಎಂದು ಅನುಮಾನ ವ್ಯಕ್ತಪಡಿಸಿದೆ.