ಬೆಂಗಳೂರು :ಬೆಲೆ ಏರಿಕೆಯ ಬಿಸಿ ಮತ್ತೆ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಲಿದೆ ಎಂದು ಜೆಡಿಎಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗೆ 50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗೆ 350.50 ರೂಪಾಯಿಗೆ ಹೆಚ್ಚಳವಾಗಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ. ದೇಶದ ಆರ್ಥಿಕತೆ ಕಷ್ಟದಲ್ಲಿರುವಾಗ, ಜನತೆಯ ಜೇಬಿಗೆ ಕತ್ತರಿ ಎಷ್ಟು ಸರಿ? ಎಂದು ಪ್ರಶ್ನಿಸಿದೆ.
ಈಗಾಗಲೇ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ನಿಂತಿರುವುದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಹಿಳೆಯರು ಗ್ಯಾಸ್ ಸಿಲಿಂಡರ್ ಕೊಳ್ಳದೆ ಮತ್ತೆ ಸೌದೆ ಬಳಕೆಗೆ ಹಿಂದಿರುಗಿದ್ದಾರೆ. ಇದೇ ವೇಳೆ, ಮತ್ತೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಏಕಾಏಕಿ ಏರಿಸಿದರೆ ಹೇಗೆ? ಕೇಂದ್ರ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ? ಎಂದು ವಾಗ್ದಾಳಿ ನಡೆಸಿದೆ.
ದೇಶದ ಜನರು ಹಣದುಬ್ಬರದಿಂದ ತತ್ತರಿಸುತ್ತಿದ್ದರೆ, ಪ್ರಧಾನಿ ಮೋದಿ ಮತ್ತವರ ಸಂಪುಟ ರಾಜ್ಯ ಚುನಾವಣೆಗಳಿಗಾಗಿ ಸುತ್ತುತ್ತಿದ್ದಾರೆ. ನಮ್ಮ ರಾಜ್ಯದ ಸರ್ಕಾರಕ್ಕಂತೂ ಮಾನ-ಮರ್ಯಾದೆ ಇಲ್ಲ. ತಮ್ಮದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಎಲ್ಲವನ್ನೂ ಸಮರ್ಥಿಸುವ ಲಜ್ಜೆಗೇಡಿತನಕ್ಕೆ ಇಳಿದಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಇಷ್ಟು ದೊಡ್ಡದಾಗಿ ಏರಿಸಿದರೆ ನಾಳೆ ಹೋಟೆಲ್, ರೆಸ್ಟೋರೆಂಟ್ಗಳ ಪರಿಸ್ಥಿತಿ ಏನಾಗಬಹುದು? ಇಲ್ಲೆಲ್ಲ ಕೆಲಸ ಮಾಡುವ ಲಕ್ಷಾಂತರ ಮಂದಿಯ ಉದ್ಯೋಗದ ಗತಿ ಏನು? ಆಹಾರದ ಬೆಲೆ ಆಕಾಶದೆತ್ತರಕ್ಕೆ ಏರಿದರೆ ಜನಸಾಮಾನ್ಯರ ಪಾಡೇನು? ಸುಳ್ಳುಗಳನ್ನೇ ಹೇಳುತ್ತಾ ಜನರ ಬದುಕು ನಿರ್ನಾಮ ಮಾಡಲಾಗುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಬಿಜೆಪಿಗೆ ಕುಟುಕಿದ ಜೆಡಿಎಸ್: ದೇಶದ ಆರ್ಥಿಕ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂಬುದಕ್ಕೆ ಜಿಡಿಪಿ ಮತ್ತು ಇನ್ನಿತರ ಮಾನದಂಡಗಳು ಉತ್ತರ ಹೇಳುತ್ತವೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಅಂಕಿ - ಅಂಶಗಳ ಪ್ರಕಾರ, ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇಕಡ 4.4ಕ್ಕೆ ಕುಸಿತ ಕಂಡಿದೆ. ಅಚ್ಚೆ ದಿನ್ ಎಂದು ಯಾವ ಬಾಯಲ್ಲಿ ಹೇಳಬೇಕೀಗ? ಎಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಪಕ್ಷ ಕುಟುಕಿದೆ.