ಬೆಂಗಳೂರು: ಮಾಜಿ ನಾಯಕ, ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತಾ ಜಾತ್ಯತೀತ ಜನತಾದಳ(ಜೆಡಿಎಸ್) ಪಕ್ಷವನ್ನು ತೊರೆಯಲು ಸಜ್ಜಾಗಿದ್ದಾರೆ. ಈ ಕುರಿತು ಇತ್ತೀಚೆಗೆ ಸ್ವತಃ ದತ್ತಾ ಅವರೇ ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಟ್ವೀಟ್ ಮಾಡಿದೆ. ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ದೇವೇಗೌಡರಿಗೆ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಜೆಡಿಎಸ್ ವೈಎಸ್ವಿ ದತ್ತಾ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ: ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು ಆಗಿರುವ ಹೆಚ್. ಡಿ ದೇವೇಗೌಡರ ' ಮಾನಸಪುತ್ರ 'ಎಂದೇ ಖ್ಯಾತಿ ಆಗಿರುವ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.
ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು: ಬಹುತೇಕ ಕಡೆ ದೇವೇಗೌಡರ ' ಮಾನಸಪುತ್ರ ' ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ' ಮಾನಸಪುತ್ರ ' ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು ಎಂದು ನೆನಪು ಮಾಡಿದೆ.
ಮಾನಸ ತಂದೆಯನ್ನು ತೊರೆಯುತ್ತಿದ್ದಾರೆ:ಅಂತಹ ದತ್ತಾ, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ' ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದಾರೆಯೇ? ಎಂದು ಪ್ರಶ್ನಿಸಿದೆ.