ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಅಡ್ಜಸ್ಟ್ ಮಾಡಿಕೊಂಡಿದ್ದರು ಎಂದು ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಸಿಡಿಮಿಡಿಗೊಂಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಒಳ ರಾಜಕೀಯವನ್ನು ತೆರೆದಿಟ್ಟಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್ ಭಾಯಿ ಭಾಯಿ ಎಂದು ಜರೆದಿದೆ.
135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷ, 'ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು' ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು, ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ ಎಂದು ಜೆಡಿಎಸ್ ಟೀಕಿಸಿದೆ.
ಜಾತಿ, ಧರ್ಮ ಒಡೆದು, ಮನಸ್ಸುಗಳ ನಡುವೆ ದ್ವೇಷದಬೆಂಕಿ ಭಿತ್ತಿ, ಪರಸ್ಪರ ವ್ಯವಹಾರದ ಪರಿಣಾಮವೇ ಈ 135 ಸೀಟು. ಶಿಗ್ಗಾಂವಿ, ವರುಣಾ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಕ್ಷೇತ್ರ ಸೇರಿ ಆಯ್ದ ಜಿಲ್ಲೆಗಳಲ್ಲಿ ನಡೆದ ಅಡ್ಜಸ್ಟ್ಮೆಂಟ್ ಆಟ ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಜೆಡಿಎಸ್ ಕಿಡಿಕಾರಿದೆ.
ಕಾರ್ಯಕರ್ತರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವ ಡಾ. ಜಿ ಪರಮೇಶ್ವರ್ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ದಮ್ಮು, ತಾಕತ್ತು ಮುಖ ಮೂತಿಗೆಲ್ಲ ಒಳ ರಾಜಕೀಯದ ಗಲೀಜು ಮೆತ್ತಿಕೊಂಡ ಎರಡೂ ಪಕ್ಷಗಳ ನಾಯಕರಿಗೆ ಇದೆಯಾ? ಹಗಲಲ್ಲಿ ಹಾರಾಟ, ಕತ್ತಲಾದರೆ ಕಳ್ಳಾಟ!! ಕಾರ್ಯಕರ್ತರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷ ಲೇವಡಿ ಮಾಡಿದೆ.