ಬೆಂಗಳೂರು:ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಡಬಲ್ ಎಂಜಿನ್ ಸರ್ಕಾರದ ನಾಟಕ ಮುಂದುವರಿದಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಎಂದಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರ ಮಾತನ್ನು ಗೋವಾ ಸಚಿವ ನೀಲೇಶ್ ಕಬ್ರಾಲ್ ಖಂಡಿಸಿದ್ದಾರೆ. ಗೋವಾದಲ್ಲಿ ಸ್ವತಃ ಬಿಜೆಪಿ ಸರ್ಕಾವೇ ಆಡಳಿತದಲ್ಲಿದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಗೋವಾ ಸರ್ಕಾರದ ಸಚಿವರೇ, ರಾಜ್ಯದ ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ಮಹದಾಯಿ ನೀರು ಕರ್ನಾಟಕಕ್ಕೆ ಹರಿಯಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿರುವಾಗ ಅಮಿಶಾ ಮತ್ತೆ ಸುಳ್ಳು ಹೇಳಿದ್ದಾರೆ. ಇದು ಲಾಭ-ನಷ್ಟದ ಪ್ರಶ್ನೆಯಾಗಿರುವುದು ದುರಂತ. ಅಗತ್ಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಊಸರವಳ್ಳಿಯ ನಡೆ ಪಾಲಿಸುತ್ತಿರುವ ಡಬಲ್ ಎಂಜಿನ್ ಸರ್ಕಾರಕ್ಕೆ ಉತ್ತರ ಕರ್ನಾಟಕದ ಸಮಸ್ಯೆಯು ಚುನಾವಣಾ ಭರವಸೆ ಅಷ್ಟೇ! ಇಂತಹ ಗಂಭೀರ ಸಮಸ್ಯೆಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುತ್ತಿರುವ ಡಬಲ್ ಎಂಜಿನ್ ಸರ್ಕಾರಗಳಿಗೆ ಕಿಂಚಿತ್ತೂ ಮಾನವೀಯತೆ ಇಲ್ಲ ಎಂದು ಆರೋಪಿಸಿದೆ.
ಹಸಿ ಸುಳ್ಳು, ಭರಪೂರ ಪ್ರಚಾರ, ಒಣ ಭರವಸೆಗಳಿಂದಾಗಿ ಸಮಸ್ಯೆಯನ್ನು ಮುಂದೂಡುತ್ತಾ ಜನರಿಗೆ ಟೋಪಿ ಹಾಕುವ ವಿಕೃತ ನಡೆ ಬಿಜೆಪಿಯದ್ದು. ಈ ಬಾರಿಯ ಚುನಾವಣೆಯಲ್ಲಿ ಕನ್ನಡಿಗರು ಇವರ ನಾಟಕ ಪ್ರದರ್ಶನಕ್ಕೆ ತೆರೆ ಎಳೆಯುವುದು ಖಂಡಿತ. ಇಂತಹ ಜನದ್ರೋಹಿ ಸರ್ಕಾರವನ್ನು ಕಿತ್ತೊಗೆಯುವುದು ಖಚಿತ ಎಂದು ವಾಗ್ದಾಳಿ ನಡೆಸಿದೆ.
ಕೇಂದ್ರದ ಬಜೆಟ್ ಬಗ್ಗೆ..:2023-24ನೇ ಸಾಲಿನ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ಆಯಿತು, ಜಾಹೀರಾತಿನ ಮಾಧ್ಯಮಗಳ ಭರ್ಜರಿ ಪ್ರಚಾರವೂ ಆಯಿತು. ಈಗ ಆಯವ್ಯಯದ ಪ್ರತಿಯನ್ನು ಕೂಲಂಕಷವಾಗಿ ನೋಡಿದರೆ ಬರೀ ನಿರಾಸೆಯೇ ಮೂಡುತ್ತದೆ. ಮೂಗಿಗೆ ತುಪ್ಪ ಸವರಿದ ಹಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಉಳ್ಳವರ ಪರ ವಕಾಲತ್ತು ವಹಿಸಿ, ಅವರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಈ ಆಯವ್ಯಯ. ತೆರಿಗೆ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದು ಬಿಟ್ಟರೆ, ಜಿಎಸ್ಟಿ ಹಾಗೂ ಇನ್ನೂ ಮುಂತಾದ ಪರೋಕ್ಷ ತೆರಿಗೆ ಇಳಿಸುವ ಬಗ್ಗೆ ಮೌನ ವಹಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗುವುದು ಎಂದು ಹೇಳಲಾಗಿದೆ. ಇದರ ಯೋಜನಾ ವೆಚ್ಚವೇ 23,000 ಕೋಟಿಯಷ್ಟಾಗುತ್ತದೆ. ಕೇಂದ್ರದ ಅನುದಾನಿತ ಯೋಜನೆಯಾಗಬೇಕೆಂದರೆ ಕನಿಷ್ಠ 50% ಅನುದಾನ ಘೋಷಿಸಬೇಕಿತ್ತು. ಇನ್ನೂ, ಇದಕ್ಕೆ ಸಂಬಂಧಿಸಿದ ವಿವರಗಳು ಅಸ್ಪಷ್ಟ. ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಶೇ 32ರಷ್ಟು ಕಡಿಮೆ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ನೀಡಿದ್ದ 89,400 ಕೋಟಿಯ ಬದಲಿಗೆ ಈ ಸಲ ಕೇವಲ 60,000 ಕೋಟಿ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಕಡಿತವಾಗಿದೆ. ಕಳೆದ ಬಾರಿ 2,43,417 ಕೋಟಿ ನೀಡಲಾಗಿತ್ತು. ಈಗ 2,38,204 ಕೋಟಿ ನೀಡಲಾಗಿದೆ. ಆಹಾರ ಸಬ್ಸಿಡಿಗೆ ಕೊಡುವ ಅನುದಾನದಲ್ಲಿ ದೊಡ್ಡ ಮಟ್ಟದ ಕಡಿತ ಮಾಡಲಾಗಿದೆ. 2022-23ರಲ್ಲಿ 2,87,194 ಕೋಟಿ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದರಲ್ಲಿ ಶೇ 31ರಷ್ಟು ಕಡಿಮೆ ಮಾಡಿ, 1,97,350 ಕೋಟಿಗೆ ಇಳಿಸಲಾಗಿದೆ. ಇಂತಹ ನಿರಾಶಾದಾಯಕ ಬಜೆಟ್ ಅನ್ನು ಜನಪರ ಎನ್ನುವರೇ, ನಿಮ್ಮ ಕುರುಡು ಅಭಿಮಾನದಿಂದ ದೇಶ ನರಳುವಂತಾಗುತ್ತಿದೆ ಎಂದು ಟೀಕಿಸಿದೆ.
ಇದನ್ನೂ ಓದಿ:ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ