ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇನ್ನು ಒಂದು ವರ್ಷ ಇರುವಾಗಲೇ ಜೆಡಿಎಸ್ ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ತೊರೆಯುವ ಘೋಷಣೆ ಮಾಡಿದ ಹಿನ್ನೆಲೆ ಮುಸ್ಲಿಂ ಮುಖಂಡರನ್ನು ಸೆಳೆಯುವ ತಂತ್ರಕ್ಕೆ ಜೆಡಿಎಸ್ ಕೈ ಹಾಕಿದೆ.
ಇದರ ಬೆನ್ನಲ್ಲೇ ಇತ್ತೀಚೆಗೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ 31 ಜಿಲ್ಲೆಗಳ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರಸ್ಪರ ಚರ್ಚೆ ನಡೆಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯ ಬಗ್ಗೆ ಮುಖಂಡರಿಗೆ ಕೆಲ ಮಹತ್ವದ ಗುರಿಗಳನ್ನು ನಿಗದಿ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಜೊತೆ ಸರ್ಕಾರ ರಚಿಸಬೇಕಾಗಿ ಬಂದ ಅನಿವಾರ್ಯ ಪರಿಸ್ಥಿತಿ ಹಾಗೂ ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೂ ಇಡೀ ಜೆಡಿಎಸ್ ಪಕ್ಷವನ್ನೇ ನುಂಗಿ ಹಾಕಲು ಷಡ್ಯಂತ್ರ ರೂಪಿಸಿದ್ದ ಸಂದರ್ಭಗಳನ್ನು ಅಲ್ಪಸಂಖ್ಯಾತ ಮುಖಂಡರ ಗಮನಕ್ಕೆ ತಂದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಅತಿ ಹೆಚ್ಚು ಅಲ್ಪಸಂಖ್ಯಾತರ ಮತ ಸೆಳೆಯುವ ತಂತ್ರಗಾರಿಕೆ ಜೆಡಿಎಸ್ ವರಿಷ್ಠರದ್ದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಸತತವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇಬ್ರಾಹಿಂ ಮತ್ತು ರೋಷನ್ ಬೇಗ್ ಸೇರಿ ಮುಸ್ಲಿಂ ಘಟಾನುಘಟಿ ನಾಯಕರನ್ನು ಪಕ್ಷಕ್ಕೆ ಕರೆ ತರುವ ತಂತ್ರಗಾರಿಕೆ ರೂಪಿಸಿದ್ದಾರೆ. ಇದರ ಬೆನ್ನಲ್ಲೇ ಸಿ ಎಂ ಇಬ್ರಾಹಿಂ ಅವರು, ರೋಷನ್ ಬೇಗ್ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸಿ ಎಂ ಇಬ್ರಾಹಿಂ ಪಕ್ಷ ಬಿಡುವ ಸೂಚನೆ ಬಳಿಕ ಕಾಂಗ್ರೆಸ್‌ನಲ್ಲಿ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ಮುಂದುವರಿಯುತ್ತಿದ್ದಂತೆ ಮುಸ್ಲಿಂ ಧರ್ಮ ಗುರುಗಳ ಸುದ್ದಿಗೋಷ್ಠಿ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇಬ್ರಾಹಿಂಗೆ ರಾಜಕೀಯ ಸಭೆಯಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳುವ, ರಂಜಿಸುವ ಕಲೆ ಕರಗತವಾಗಿದೆ.
ಈಗ ನಡೆಯುತ್ತಿರುವ ಬೆಳವಣಿಗೆ ಕಾಂಗ್ರೆಸ್‌ಗೆ ಇರುಸು-ಮುರುಸು ಉಂಟು ಮಾಡುತ್ತಿದೆ. ಧಾರ್ಮಿಕ ಮುಖಂಡರು ದನಿ ಎತ್ತಿರುವುದು ಒಂದು ರೀತಿಯಲ್ಲಿ ಮುಜುಗರ ತಂದಿದೆ. ಇದೇ ದನಿ ದೊಡ್ಡದಾಗದಂತೆ ಪಕ್ಷ ತಡೆಯುವ ನಿಟ್ಟಿನಲ್ಲಿ ಪಕ್ಷದ ಅಲ್ಪಸಂಖ್ಯಾತ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ನಡೆಸುವ ಮೂಲಕ ಇಂತಹ ದನಿ ಪುನರಾವರ್ತನೆಯಾಗಬಾರದೆಂದು ಶಾಸಕರಿಗೆ ಸಂದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿರುವ ಅಲ್ಪಸಂಖ್ಯಾತ ಸಮುದಾಯ ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗಿದ್ದು, ಕಾಂಗ್ರೆಸ್ ಜೊತೆಗಿದೆ. ಹೀಗಿರುವಾಗ ಕಡೆಗಣಿಸುವುದು ಸರಿಯಲ್ಲ. ಪಕ್ಷದಲ್ಲಿ ಇಬ್ರಾಹಿಂ ಬೆಳವಣಿಗೆಯಿಂದ ಪಕ್ಷಕ್ಕೆ ಏನೂ ನಷ್ಟವಿಲ್ಲದಿದ್ದರೂ, ಕಾಂಗ್ರೆಸ್‌ನಿಂದ ನಮ್ಮ ಸಮುದಾಯದ ನಾಯಕರಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ವಾದ ಬಲಗೊಳ್ಳುತ್ತಾ ಹೋದರೆ, ಜೆಡಿಎಸ್‌ಗೆ ಕೆಲವು ಕಡೆಗಳಲ್ಲಿ ಲಾಭ ಆಗಬಹುದು ಎಂಬುದು ಕೆಲವು ಅಲ್ಪಸಂಖ್ಯಾತ ಮುಖಂಡರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಹಿಜಾಬ್, ಶಾಲು ಹಾಕೊಂಡ್ ಬಂದ್ರೆ ನೋ ಎಂಟ್ರಿ.. ಕೋರ್ಟ್ ತೀರ್ಪು ಬರೋವರೆಗೂ ಸಮವಸ್ತ್ರ ಧರಿಸಿಯೇ ಬರಬೇಕು: ಶಿಕ್ಷಣ ಸಚಿವ