ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಪ್ರಚಾರ ರಂಗೇರಿದೆ. ಜೆಡಿಎಸ್ ದಳಪತಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ವರಿಷ್ಠರು, ಅದರಲ್ಲೂ ಸಿಂದಗಿ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.
ಇಳಿವಯಸ್ಸಿನಲ್ಲೂ ಖುದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿಂದಗಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ, ಸಂಸದ ಪ್ರಜ್ವಲ್ ರೇವಣ್ಣ ಸಹ ಸಿಂದಗಿಯಲ್ಲೇ ಪ್ರಚಾರಕ್ಕಾಗಿ ವಾಸ್ತವ್ಯ ಹೂಡಲಿದ್ದಾರೆ. ಆ ಮೂಲಕ ತಾತ, ಮೊಮ್ಮಗನ ಜೋಡಿ ಸಿಂದಗಿ ಕ್ಷೇತ್ರದಲ್ಲಿ ಮೋಡಿ ಮಾಡುತ್ತಾರಾ? ಎಂಬ ಚರ್ಚೆ ಎದ್ದಿದೆ.
ಹಾನಗಲ್ ಕ್ಷೇತ್ರಗಿಂತ ಸಿಂದಗಿಯಲ್ಲೇ ಹೆಚ್ಚು ಪ್ರಚಾರ ಮಾಡುತ್ತಿರುವ ಹೆಚ್.ಡಿ ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಹ ಇಂದಿನಿಂದ ಸಾಥ್ ನೀಡುತ್ತಿದ್ದಾರೆ.
ತಾತ - ಮೊಮ್ಮಗನ ಜಂಟಿ ತಂತ್ರಗಾರಿಕೆ ಏನು?: ಹಿರಿಯ ಮತ್ತು ಕಿರಿಯ ದಳಪತಿಗಳ ಜಂಟಿ ಪ್ರಚಾರದ ಹಿಂದೆ ಅವರದ್ದೇ ಆದ ತಂತ್ರಗಾರಿಕೆ ಇದೆ. ಸಿಂದಗಿ ಕ್ಷೇತ್ರದಿಂದ ಜೆಡಿಎಸ್ನಿಂದ ಎಂ.ಸಿ ಮನಗೂಳಿ ಆಯ್ಕೆಯಾಗಿದ್ದರು. ಹೀಗಾಗಿ, ಅಲ್ಲಿ ಜೆಡಿಎಸ್ ಮತಗಳಿವೆ ಎಂಬುದು ಸತ್ಯ. ಬದಲಾದ ಸನ್ನಿವೇಶದಲ್ಲಿ ಎಂ.ಸಿ. ಮನಗೂಳಿ ಮಗ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅಶೋಕ್ ಮನಗೂಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರೂ, ಕಾರ್ಯಕರ್ತರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ.
ಇನ್ನು ಪ್ರಜ್ವಲ್ ರೇವಣ್ಣ ಅವರಿಗೆ ಅಷ್ಟೇ ವರ್ಚಸ್ಸಿದೆ. ಯುವಕರನ್ನು ಪಕ್ಷಕ್ಕೆ ಕರೆತರಲು, ಯುವ ಪಡೆ ಕಟ್ಟಲು ಪ್ರಜ್ವಲ್ ಅವರೇ ಸೂಕ್ತ ಎಂಬುದು ದೇವೇಗೌಡರ ಅಭಿಪ್ರಾಯ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಜ್ವಲ್ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಜಂಟಿ ಪ್ರಚಾರದ ಮೆಗಾ ಪ್ಲ್ಯಾನ್ ಮಾಡಿದ್ದಾರೆ.
ಮೊದಲಿನಿಂದಲೂ ಉತ್ತರ ಕರ್ನಾಟಕದ ಸಂಘಟನೆಗೆ ಹೆಚ್ಚು ಆಸಕ್ತರಾಗಿರುವ ಪ್ರಜ್ವಲ್ ಅವರಿಗೂ ಇದು ಸವಾಲು. ಹಾಗಾಗಿ, ಹೆಚ್ಚು ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳಲು ಪ್ರಜ್ವಲ್ ಮುಂದಾಗುತ್ತಿದ್ದಾರೆ.
ಸಿಂದಗಿ ಕ್ಷೇತ್ರದ ಮೇಲೆ ಹೆಚ್ಚು ಒಲವು : ಹಾನಗಲ್ ಕ್ಷೇತ್ರಕ್ಕಿಂತ ಸಿಂದಗಿ ಕ್ಷೇತ್ರದ ಬಗ್ಗೆ ಜೆಡಿಎಸ್ ಹೆಚ್ಚು ಉತ್ಸುಕತೆಯಿಂದ ಕೆಲಸ ಮಾಡುತ್ತಿದೆ. ಇದಕ್ಕೆ ಮೂಲ ಕಾರಣ, ದೇವೇಗೌಡರು ನೀಡಿರುವ ನೀರಾವರಿ ಯೋಜನೆಗಳು.
ಆಲಮಟ್ಟಿ ಜಲಾಶಯದ ಮಟ್ಟವನ್ನು ಎತ್ತರಕ್ಕೆ ಏರಿಸುವ ಮೂಲಕ ಸಿಂದಗಿ ಹಾಗೂ ಇಂಡಿ ತಾಲೂಕಿನ ಲಕ್ಷಾಂತರ ಎಕರೆಗೆ ನೀರು ಕೊಡುವಲ್ಲಿ ದೇವೇಗೌಡರು ಕಾರಣಕರ್ತರಾಗಿದ್ದರು. ಹಾಗಾಗಿಯೇ, ಎಂ. ಸಿ ಮನಗೂಳಿ ಅವರು ಅದೇ ಅಭಿಮಾನದಿಂದ ದೇವೇಗೌಡರ ಪ್ರತಿಮೆ ಮಾಡಿಸಿದ್ದಾರೆ.
ನೀರಾವರಿ ಯೋಜನೆ ನೀಡಿದ್ದಕ್ಕಾಗಿ ದೇವೇಗೌಡರ ಮೇಲಿನ ಅಭಿಮಾನ ಮತಗಳಾಗಿ ಪರಿವರ್ತನೆಯಾಗಬಹುದೆಂಬ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ. ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಪ್ರಚಾರ ನಡೆಸುತ್ತಿರುವ ಹೆಚ್. ಡಿ ದೇವೇಗೌಡರು, ಅಕ್ಟೋಬರ್ 27 ರವರೆಗೆ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಸಿಂದಗಿಯಲ್ಲಿ ಗೆಲ್ಲಲೇಬೇಕು: ಸಿಂದಗಿ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ದಳಪತಿಗಳು ನಿರ್ಧರಿಸಿದ್ದಾರೆ. ಇಂದಿನಿಂದ ಮಾಜಿ ಸಿ ಎಂ ಹೆಚ್. ಡಿ ಕುಮಾರಸ್ವಾಮಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರವಾಗಿ ಇಂದಿನಿಂದ ಅ.22 ರ ವರೆಗೆ ನಾಲ್ಕು ದಿನ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅ. 23 ರಂದು ಒಂದು ದಿನ ಮಾತ್ರ ಹಾನಗಲ್ನಲ್ಲಿ ಹೆಚ್ಡಿಕೆ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ಪಕ್ಷದ ಮುಖಂಡರು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಸಿಂದಗಿಯಲ್ಲೇ ನಾಲ್ಕು ದಿನ ಕುಮಾರಸ್ವಾಮಿ ಮೊಕ್ಕಾಂ
ನಾಲ್ಕು ದಿನಗಳ ಕಾಲ ಸಿಂದಗಿ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಲಿರುವ ಕುಮಾರಸ್ವಾಮಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಬೇಕಾಗಿರುವ ಸಲಹೆ - ಮಾರ್ಗದರ್ಶನಗಳನ್ನು ಪಕ್ಷದ ಮುಖಂಡರಿಗೆ ನೀಡಲಿದ್ದಾರೆ. ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಈ ಉಪಚುನಾವಣೆಯನ್ನು ದಿಕ್ಸೂಚಿ ಎಂದೇ ಜೆಡಿಎಸ್ ಪರಿಗಣಿಸಿದೆ. ಅಲ್ಲದೇ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶತಾಯ - ಗತಾಯ ಪ್ರಯತ್ನ ನಡೆಸುತ್ತಿದೆ.
ಹೆಚ್.ಡಿ ದೇವೇಗೌಡರು ಸಿಂದಗಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನಾಜಿಯಾ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ವಿಜಯದಶಮಿ ಹಬ್ಬಕ್ಕೂ ಮುನ್ನ ಒಂದು ಸುತ್ತಿನ ಪ್ರವಾಸ ಕೈಗೊಂಡು ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರವನ್ನು ಸಿಂದಗಿ ಕ್ಷೇತ್ರದಲ್ಲಿ ಗೌಡರು ಮಾಡಿದ್ದರು. ಮತ್ತೆ ಎರಡನೇ ಹಂತದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಒಟ್ಟಾರೆ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ದಳಪತಿಗಳು ಎಲ್ಲ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ಓದಿ:ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ನಿಂದ ಸಿಎಂಗೆ ಲೀಗಲ್ ನೋಟಿಸ್: ಕಾರಣ?