ಬೆಂಗಳೂರು: ವಿಧಾನಸೌಧಕ್ಕೆ ಹಿಡಿದಿರುವ ಗ್ರಹಣ ಹೋಗಲಾಡಿಸಲು 80 ದಿನಗಳ ನಂತರ ನವಗ್ರಹ ಪೂಜೆ ಮಾಡಿ, ಪಾಪ ತೊಳೆಯುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ನಮ್ಮ ಪಂಚರತ್ನ ರಥಯಾತ್ರೆಯನ್ನು ನವಗ್ರಹಕ್ಕೆ ಹೋಲಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸಿಡಿ ಪ್ರಕರಣದ ಪಾಪ ತೊಳೆಯಬೇಕಿದೆ ಎಂದು ತಿರುಗೇಟು ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಕ್ಕದಲ್ಲೇ ಸಿ.ಡಿ.ಪ್ರಕರಣದ ಆರೋಪಿಗಳು ಕುಳಿತಿದ್ದಾರೆ. ಇದು ಅವರಿಗೆ ಗೌರವ ಕೊಡುತ್ತದೆಯೇ ಎಂದು ಪ್ರಶ್ನಿಸಿದರು.
ಟಿಪ್ಪು ವಿರುದ್ಧ ಹೇಳಿಕೆ ಸರಿಯಲ್ಲ:ಟಿಪ್ಪು ವಿಚಾರದಲ್ಲಿ ಬಿಜೆಪಿ ಮುಖಂಡರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರೇ ಟಿಪ್ಪು ಅವರ ಗುಣಗಾನ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪುವಿಗೆ ಗೌರವ ಕೊಟ್ಟಿದ್ದಾರೆ ಎಂದು ಹೇಳಿದರು. ಸಚಿವ ಅಶ್ವತ್ಥನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು. ಸಚಿವರ ವಿರುದ್ಧ ಕ್ರಮ ಕೈಗೊಂಡರೆ ರಾಜ್ಯಕ್ಕೂ ಗೌರವ ಬರುತ್ತದೆ. ಇತಿಹಾಸ ಗೊತ್ತಿಲ್ಲದವರು ಪಠ್ಯಪುಸ್ತಕ, ಸ್ಮಾರ್ಥ, ಮಾಧ್ವರ ಬಗ್ಗೆ ಮಾತನಾಡುತ್ತಾರೆ. ಜಾತಿ, ಹಿಜಾಬ್, ಜಲ್ಲಿಕಟ್ಟು, ಹಲಾಲ್ ವಿಚಾರ ಬಿಟ್ಟು ಚುನಾವಣೆ ಸಂದರ್ಭದಲ್ಲಿ ವಿಷಯಾಧಾರಿತ ಚರ್ಚೆ ನಡೆಯಲಿ ಎಂದು ಹೇಳಿದರು.