ಕರ್ನಾಟಕ

karnataka

ETV Bharat / state

ನನಗೆ ನೋವಾಗಿದೆ.. ಅಕ್ಟೋಬರ್​ 16ರಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ - ಅಕ್ಟೋಬರ್​ 16ರಂದು ಸಮಾನ ಮನಸ್ಕರ ಸಭೆ

ನಮ್ಮದು ಪ್ರಾದೇಶಿಕ ಪಕ್ಷ. ನಾನು ಇದುವರೆಗೆ ಕುಮಾರಸ್ವಾಮಿ, ಹೆಚ್​.ಡಿ ದೇವೇಗೌಡ ಅವರ ಬಳಿಯೂ ಮಾತನಾಡಿಲ್ಲ. ದೆಹಲಿಗೆ ಹೋಗಿದ್ದರೂ, ಏನು ಚರ್ಚೆ ಮಾಡಿದ್ದಾರೆ ಎಂದು ನನ್ನ ಬಳಿ ಹೇಳಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥ ಇಲ್ಲ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದಾರೆ.

jds-state-president-cm-ibrahim-statement
ನನಗೆ ನೋವಾಗಿದೆ..ಅಕ್ಟೋಬರ್​ 16ರಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

By ETV Bharat Karnataka Team

Published : Sep 30, 2023, 6:06 PM IST

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆ

ಬೆಂಗಳೂರು: ನನಗೆ ಅಕ್ಟೋಬರ್​ 16ರವರೆಗೆ ಅವಕಾಶ ಬೇಕು. ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದು ಪ್ರಾದೇಶಿಕ ಪಕ್ಷ. ನಾನು ಕುಮಾರಸ್ವಾಮಿ ಬಳಿ ಮಾತನಾಡಿಲ್ಲ. ಕುಮಾರಸ್ವಾಮಿ ನನಗೆ ಸಹೋದರ ಸಮಾನ. ದೇವೇಗೌಡರು ನನ್ನ ತಂದೆ ಸಮಾನ. ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ನನ್ನ ಬಳಿ ಹೇಳಿಲ್ಲ. ಏನು ಚರ್ಚೆ ಮಾಡಿದ್ರು ಎಂದು ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಹೇಳಿದರು.

ಅಕ್ಟೋಬರ್​ 16ರಂದು ಸಮಾನ ಮನಸ್ಕರ ಸಭೆ ಕರೆದಿದ್ದೇನೆ. ನಾನು ಜನರ ಬಳಿ ಅಭಿಪ್ರಾಯ ಪಡೆಯುವೆ.‌ ಪಕ್ಷದಲ್ಲಿ ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಈ ಬಾರಿ‌ 20 ಪರ್ಸೆಂಟ್ ವೋಟ್ ಜೆಡಿಎಸ್​ಗೆ ಸಿಕ್ಕಿದೆ. ಮುಸ್ಲಿಂಮರು ಮತ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು. ಬಿಜೆಪಿ ಸೋಲಿಸಲು ಮತ ಹಾಕಿದ್ದಾರೆ ಎಂದರು. ಯಾವುದೇ ನಿರ್ಧಾರ ಕೈಗೊಳ್ಳಬೇಕು ಎಂದರೂ ಪಕ್ಷದಲ್ಲಿ ಆ ಬಗ್ಗೆ ಚರ್ಚೆ ಆಗಬೇಕು. ಇವತ್ತಿನವರೆಗೂ ನನ್ನ ಸಹಿ ಇಲ್ಲದೇ ಯಾವ ಪೇಪರ್ ಹೊರ ಬಂದಿಲ್ಲ. ಕೋರ್ ಕಮಿಟಿ ಪ್ರವಾಸ ಆದ ನಂತರ ತೀರ್ಮಾನ ಮಾಡುತ್ತೇವೆ ಅಂದರು. ಆದರೆ ಅದಕ್ಕೂ ಮೊದಲೇ ದೆಹಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್ ನವರೂ ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ದೇವೇಗೌಡರ ಬಳಿ ಮಾತನಾಡಿಯೇ ಹೋಗೋದು. ಪಕ್ಷವನ್ನು ಯಾರೂ ಬಿಟ್ಟಿಲ್ಲ. ದೆಹಲಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಶರತ್ ಪವಾರ್ ಮಾತನಾಡಿದ್ದಾರೆ. ಆಪ್ ಪಕ್ಷದ ನಾಯಕರೂ ಮಾತನಾಡಿದ್ದಾರೆ. ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ. ಹೆಚ್.ಡಿ. ಕುಮಾರಸ್ವಾಮಿ, ದೇವೇಗೌಡರ ಜೊತೆ ಮಾತನಾಡಿ ಮುಂದೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ನಾನು ಜೆಡಿಎಸ್​​ಗೆ ಬಂದಿದ್ದು ನನ್ನ ಕರ್ತವ್ಯ ಮಾಡಲು. ಮುಂದೆಯೂ ಪಕ್ಷದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಮಾತುಕತೆ ಮಾಡಿಕೊಂಡು ಬಂದಿದ್ದಾರೆ ಇದು ಸರಿನಾ? ಎಂದು ಪ್ರಶ್ನಿಸಿದ ಇಬ್ರಾಹಿಂ, ಈ ಮೈತ್ರಿ ಸರಿಯಲ್ಲ ಎಂದರೆ ಮುಂದೇನು?. ನಿತೀಶ್ ಕುಮಾರ್ ಜೊತೆ ಹೋಗುವುದಾ?, ಶರದ್ ಪವಾರ್ ಜೊತೆ ಹೋಗುವುದಾ?. ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ಮೈತ್ರಿ ಯಾರಿಗೆ ಬೇಕಾಗಿರೋದು ಅವರಿಗೋ, ನಮಗೋ?. ನಮಗೆ ಮೈತ್ರಿ ಬೇಕಾಗಿಲ್ಲ ಎಂದು ದೇವೇಗೌಡರೇ ಹೇಳಿದ್ದಾರೆ.‌ ಕುಮಾರಸ್ವಾಮಿ ಅವರು ಹೋಗಿ ಭೇಟಿಯಾಗಿದ್ದು ನೋವಾಗಿದೆ. ನನ್ನ ಬಳಿ ಒಂದು ಮಾತನಾಡಿ ಹೋಗಿದ್ದರೆ ಏನಾಗುತಿತ್ತು. ನನ್ನ ಬಳಿ ಮಾತನಾಡಲು ಕುಮಾರಸ್ವಾಮಿ ಅವರು ಪ್ರಯತ್ನ ಪಟ್ಟಿದ್ದಾರೆ. ಆದರೆ, 16ರ ನಂತರ ಮಾತನಾಡುತ್ತೇನೆಂದು ಹೇಳಿದ್ದೀನಿ. ಜನತಾ ದಳ ಹಿಂದು, ಮುಸ್ಲಿಂ ಪಾರ್ಟಿ ಅಲ್ಲ. ಕರ್ನಾಟಕ ಜನತೆಯ ಪಾರ್ಟಿ ಇದು ಎಂದು ಹೇಳಿದರು.

ಕಾವೇರಿ ವಿಚಾರವಾಗಿ ಮಾತನಾಡಿ, ಕಾವೇರಿ ಪ್ರದೇಶದಲ್ಲಿ ಜನ ಒದ್ದಾಡ್ತಾ ಇದ್ದಾರೆ. ಎಂಪಿಗಳು ಏನು ಮಾಡ್ತಾ ಇದ್ದಾರೆ. ಇದರ ಬಗ್ಗೆ ಏನಾದ್ರೂ ಚರ್ಚೆ ಆಯ್ತಾ?. ಮೈತ್ರಿ ಅಂದರೆ ಏನು ಹಾಗಾದ್ರೆ. ಮದುವೆ ಆದ ಮೇಲೆ ಮುಂದೇನು?. ನಮ್ಮ ಸಿದ್ದಾಂತ ಬಿಟ್ಟು ಕೊಡಲು ನಾವು ತಯಾರಿಲ್ಲ. ಹಾಗಾದರೆ ಇದು ಚರ್ಚೆ ಆಗಿದೆಯಾ?. ಕುಮಾರಸ್ವಾಮಿ ಬಹಿರಂಗವಾಗಿ ಹೇಳಲಿ ಎಂದರು.

ಬಿಜೆಪಿ ನಾಯಕರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನೇ ಕರೆದಿಲ್ಲ. ಇನ್ನೂ ಲೀಡರ್ ಆಫ್ ಆಪೋಸಿಷನ್ ಮಾಡಿಲ್ಲ. ಬಿಎಸ್ ವೈ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತದೆ. ನನ್ನ ಪ್ರಸ್ತಾಪಕ್ಕೆ ಬಿಜೆಪಿಯಲ್ಲಿ ಉತ್ತರ ಇದೆಯಾ ?. ನನ್ನ ನಿಲುವಿನ ಬಗ್ಗೆ ಇಂದು ಮಾತಾಡಿದ್ರೆ ಸರಿಯಲ್ಲ. ಕಾಲಾಯೇ ತಸ್ಮೈಃ ನಮಃ. ಕಾಲವೇ ಕಾಲಕ್ಕೆ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ :ಅದಷ್ಟು ಬೇಗ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ನೇಮಕ‌ ಮಾಡಲಿ: ಕೆ.ಎಸ್.ಈಶ್ವರಪ್ಪ ಒತ್ತಾಯ

ABOUT THE AUTHOR

...view details