ಬೆಂಗಳೂರು: ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಬಗ್ಗೆ ಆ ಸಮಾಜದ ಜನ ಮತ್ತು ನಾಯಕರು ವಿಚಾರ ಮಾಡಬೇಕು. ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಸರ್ಕಾರ ಆಡಿದ್ದೇ ಆಟ ಎಂಬಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹೇಳಲು ಹೋದ್ರೆ ಅಧಿಕಾರ ಸಿಕ್ಕಿಲ್ಲ ಎಂದು ಈ ವಿಷಯ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಆದರೂ ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ ಯಾವ ರೀತಿ ಎಸ್ ಸಿ, ಎಸ್ ಟಿ ಹಣ 11 ಸಾವಿರ ಕೋಟಿ ರೂ. ಬಳಸಿಕೊಳ್ಳುತ್ತೀರಾ, ಕಾನೂನು ಏನಾದ್ರೂ ಬದಲಾವಣೆ ಮಾಡುತ್ತಿರಾ? ಎಂದು ಪ್ರಶ್ನಿಸಿದರು. ಈ ಹಣ ಬೇರೆ ಯಾವುದಕ್ಕೂ ಬಳಸಿಕೊಳ್ಳುವ ಅವಕಾಶ ಇಲ್ಲ ಎಂದು ಇದೇ ವೇಳೆ ಹೇಳಿದರು.
ಹಳ್ಳಿಗಳಲ್ಲಿ ಕಳಪೆ ಅಕ್ಕಿ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 5 ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯಾ ಎಂದು ತಿಳಿಯಲು ಕಮಿಟಿ ರಚನೆ ಮಾಡಿ. ಈ ಬಾರಿ ಅಭಿವೃದ್ಧಿ ಕೆಲಸ ಇಲ್ಲ ಎಂದು ನೀವೇ ಹೇಳುತ್ತಿದ್ದಿರಾ, ಮತ್ತೆ ಯಾವ ರೀತಿ ರಸ್ತೆ ಸೇರಿ ಅಭಿವೃದ್ಧಿ ಕೆಲಸ ಮಾಡುತ್ತಿರಾ ಎಂದು ಇಬ್ರಾಹಿಂ ಪ್ರಶ್ನಿಸಿದರು. ನೀವು 5 ವರ್ಷ ಅಧಿಕಾರದಲ್ಲಿ ಇರಲಿದ್ದೀರಾ. ಹಾಗಾಗಿ ಸರ್ವ ಪಕ್ಷದ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.
ಫ್ರೀ ಗ್ಯಾರಂಟಿ ಯೋಜನೆ ತೆಗೆಯಿರಿ. ರಾಜ್ಯದ ಅಭಿವೃದ್ಧಿ ಬಗ್ಗೆ ಕೆಲಸ ಮಾಡಿ. ಸಿದ್ದರಾಮಯ್ಯ ಸಕ್ಸಸ್ ಆಗಬೇಕು ಎಂಬುದು ನಮಗೂ ಇದೆ ಎಂದು ಹೇಳಿದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಮತ್ತು ಗ್ಯಾರಂಟಿ ಮೂಲಕ ಲೋಕಸಭೆ ಚುನಾವಣೆಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಯಾವ ಹೆಸರಿನಲ್ಲಿ ಹೋಗ್ತಾರೆ ಎಂಬ ಚಿಂತೆ ಇಲ್ಲ ಎಂದರು.