ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರದ ಕೆಸರೆರೆಚಾಟದಲ್ಲಿ ಬಿಜೆಪಿ, ಕಾಂಗ್ರೆಸ್ ಅದ್ಭುತ ನಾಟಕ: ಜೆಡಿಎಸ್ - ಪಂಚರತ್ನ ಯೋಜನೆ

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಸರಣಿ ವೇಗ ಪಡೆದುಕೊಂಡಿದೆ. ಇದೀಗ ಜೆಡಿಎಸ್​ ಪಕ್ಷವು ಸರಣಿ ಟ್ವೀಟ್‌ಗಳ​ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

jds
ಜೆಡಿಎಸ್

By

Published : Jan 27, 2023, 2:10 PM IST

ಬೆಂಗಳೂರು: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ 'ಅದ್ಭುತ ನಾಟಕ'ವು ಚುನಾವಣೆ ಹತ್ತಿರ ಬಂದಾಗಲೇ ಏಕೆ ಪ್ರದರ್ಶಿತವಾಗುತ್ತದೆ?. ಮನಬಂದಂತೆ ಬಳಸಿಕೊಳ್ಳಲು ಜನರು ನಿಮ್ಮ ಸ್ವಂತ ಆಸ್ತಿಯೇ?, ಎಲ್ಲರನ್ನು ಮೂರ್ಖರು ಎಂದು ಭಾವಿಸಿದ್ದೀರಾ? ಅಂತಾ ಜೆಡಿಎಸ್ ಪಾರ್ಟಿಯು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, "ಜನತೆಗೆ ಹೆಚ್ಚು ದುಡ್ಡು ಹಂಚಿ ಅಧಿಕಾರ ಪಡೆಯುತ್ತೇವೆ ಎಂದು ಬೀಗುವವರು ಒಂದು ಕಡೆಯಾದರೆ, ನಾವೇನು ಕಮ್ಮಿ ಇಲ್ಲ ಎಂದು ಅಬ್ಬರಿಸುವ ವಿರೋಧ ಪಕ್ಷ ಇನ್ನೊಂದು ಕಡೆ. ನಿಮ್ಮಿಬ್ಬರ ರಾಜಕೀಯ ಆಟಗಳಿಂದ ರಾಜ್ಯದ ಜನರು ಬಸವಳಿದಿದ್ದಾರೆ. ರಾಜಕೀಯ, ಆಡಳಿತ, ಜನಪರತೆ ಎಂಬುದೆಲ್ಲ ಬುರ್ನಾಸು ಎಂದು ಪ್ರಜ್ಞಾವಂತರು ಹಿಡಿಶಾಪ ಹಾಕುತ್ತಿದ್ದಾರೆ" ಎಂದು ಟೀಕಾ ಪ್ರಹಾರ ನಡೆಸಿದೆ.

ಅಧಿಕಾರಕ್ಕಾಗಿ ಎಷ್ಟು ಬೇಕಾದರೂ ಕೆಳಮಟ್ಟಕ್ಕೆ ಇಳಿಯುವ ಮಾನಗೆಟ್ಟ ಪಕ್ಷಗಳಿವು ಎಂದು ಜನರಿಗೆ ಅರ್ಥವಾಗುತ್ತಿದೆ. ಕತ್ತಲ ದಿನಗಳಲ್ಲಿ ಕಾಣುವ ಬೆಳಕಿನ ಕೋಲ್ಮಿಂಚಿನಂತೆ ಪಂಚರತ್ನ ಯೋಜನೆ ಇಟ್ಟುಕೊಂಡು, ಜನರ ಬಳಿ ಜೆಡಿಎಸ್ ಪಕ್ಷ ತೆರಳಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ಅದರ ಮಂತ್ರ. ಕೊಳಕು ರಾಜಕಾರಣ ನಿಮ್ಮಲ್ಲಿಯೇ ಇರಲಿ ಎಂದು ಹೇಳಿದೆ.

ಇದನ್ನೂ ಓದಿ:'ಭವಾನಿ ರೇವಣ್ಣ ಅನಿವಾರ್ಯತೆ ಹಾಸನ ಕ್ಷೇತ್ರಕ್ಕಿದ್ದಿದ್ದರೆ ನಾನೇ ಸ್ಪರ್ಧಿಸುವಂತೆ ಹೇಳುತ್ತಿದ್ದೆ': ಹೆಚ್​ಡಿಕೆ

ಮಾನವ ಸಂಪನ್ಮೂಲಗಳ ಕ್ಷಮತೆ ಹೆಚ್ಚಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿ, ಆ ಮೂಲಕ ರಾಜ್ಯಕ್ಕೆ ಪ್ರತಿಯೊಬ್ಬ ಕನ್ನಡಿಗನನ್ನು ಅಮೂಲ್ಯ ಆಸ್ತಿಯನ್ನಾಗಿ ರೂಪಿಸುವ ಉದ್ದೇಶವೇ ಪಂಚರತ್ನ ಯೋಜನೆಯ ಆಶಯ. ಎರಡೂ ಹೈಕಮಾಂಡ್ ಗುಲಾಮಿ ಪಕ್ಷಗಳಿಂದ ಭರವಸೆ ಕಳೆದುಕೊಂಡಿರುವ ಕನ್ನಡಿಗರಿಗೆ, ಜೆಡಿಎಸ್​ನ ಯೋಜನೆಯ ಮಹತ್ವ ಅರಿವಾಗುತ್ತಿದೆ ಎಂದಿದೆ.

ಇದನ್ನೂ ಓದಿ:ಯಾವ ಮುಖ ಇಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಹಸಿ ಸುಳ್ಳು ಹೇಳುತ್ತಿದ್ದೀರಿ: ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಟಾಂಗ್

ಸಚಿವ ಜೆ ಸಿ ಮಾಧುಸ್ವಾಮಿ ವಿರುದ್ಧ ಜೆಡಿಎಸ್​ ಸರಣಿ ಟ್ವೀಟ್: ಕಳೆದ ಮೂರು ದಿನಗಳ ಹಿಂದಷ್ಟೇ ಸರಣಿ ಟ್ವೀಟ್ ಮಾಡಿದ್ದ ಜೆಡಿಎಸ್,​ ಸಚಿವ ಜೆ ಸಿ ಮಾಧುಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿತ್ತು. "ಮಾಧುಸ್ವಾಮಿ ಅವರೇ, ದೇವೇಗೌಡರು ಕೆಳಮಟ್ಟದಿಂದ ಬೆಳೆದು ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದವರು. ರಾಜ್ಯದ ಜನತೆಯ ಸ್ವಾಭಿಮಾನ ಮತ್ತು ನೆಮ್ಮದಿ ಕಾಪಾಡಲು ಈ ಇಳಿವಯಸ್ಸಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ. ಸವೆಸಿದ ಹಾದಿಯ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಹೆಮ್ಮೆಯಿದೆ. ಹಲಾಲುಟೋಪಿ ಕೆಲಸ ಮಾಡುತ್ತಾ ಮೇಲೆ ಬಂದವರಲ್ಲ. ಆಡಳಿತ ನಡೆಸುವ ಬದಲು ಸರ್ಕಾರವು ಏನೋ ಒಂದು ನಿಭಾವಣೆ ಮಾಡುತ್ತಾ, ಕಾಲತಳ್ಳುತ್ತಿದೆ ಎಂದು ಹೇಳಿದ ಭೂಪ ನೀವೇ ಅಲ್ಲವೆ?, 40 ಪರ್ಸೆಂಟ್​ ಕಮಿಷನ್ ಸರ್ಕಾರವೆಂದೇ ಕುಖ್ಯಾತವಾಗಿರುವ ನಿಮ್ಮ ಸರ್ಕಾರ ದೋಚುತ್ತಿರುವ ಸಾರ್ವಜನಿಕರ ಹಣದ ಬಗ್ಗೆ ಲೆಕ್ಕ ಇದೆಯೆ? ಎಂದು ಕುಟುಕಿತ್ತು.

ಇದನ್ನೂ ಓದಿ:ಯಾವ ಮುಖ ಇಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಹಸಿ ಸುಳ್ಳು ಹೇಳುತ್ತಿದ್ದೀರಿ: ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಟಾಂಗ್

ABOUT THE AUTHOR

...view details