ಬೆಂಗಳೂರು : ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಸೈಯದ್ ಶಫಿವುಲ್ಲಾ ಸಾಹೇಬ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿ ನನಗೆ ಒಪ್ಪಿಗೆಯಿಲ್ಲ ಎಂದು ತಿಳಿಸಿರುವ ಅವರು, ನಿರ್ಧಾರದ ಕುರಿತು ಪಕ್ಷದ ಇತರ ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.
ಶಫೀವುಲ್ಲಾ ರಾಜೀನಾಮೆ ಪತ್ರ: “ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಜೊತೆ ಕೈಜೋಡಿಸಿದ್ದರು. ಸರ್ಕಾರ ರಚಿಸಲು ಪಕ್ಷದ ನಮ್ಮ ರಾಜ್ಯ ಘಟಕವು ಬಿಜೆಪಿಯೊಂದಿಗೆ ಸೇರಿಕೊಂಡ ಅವಧಿಯಲ್ಲಿ ನಾನು ಪಕ್ಷದಿಂದ ಹೊರಗುಳಿಯಲು ನಿರ್ಧರಿಸಿದ್ದೆ. ಪಕ್ಷದ ಹಿರಿಯ ನಾಯಕರು ಈಗ ಮತ್ತೆ ಬಿಜೆಪಿಯೊಂದಿಗೆ ಮೈತ್ರಿಗೆ ನಿರ್ಧರಿಸುತ್ತಿರುವುದರಿಂದ, ಹಿರಿಯ ಉಪಾಧ್ಯಕ್ಷ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ."
ಇದನ್ನೂ ಓದಿ:ಅಂದು ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದಾಗಿ ನಾನು, ಖರ್ಗೆ, ಮುನಿಯಪ್ಪ ಸೋತೆವು.. ಈಗ ಬಿಜೆಪಿಗೆ ಅನಿಷ್ಟ ಹೊಕ್ಕಿದೆ ಎಂದ ಮೊಯ್ಲಿ
ರಾಜೀನಾಮೆ ಪತ್ರವನ್ನು ಜೆಡಿಎಸ್ ಕರ್ನಾಟಕ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಗೆ ಕಳುಹಿಸಿದ್ದಾರೆ. ಹಲವು ರಾಜ್ಯ ಪದಾಧಿಕಾರಿಗಳು ಶೀಘ್ರದಲ್ಲೇ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್‌ನ ಹಲವು ಶಾಸಕರು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಜನತಾ ದಳ (ಜಾತ್ಯತೀತ) ಶುಕ್ರವಾರ ಸೇರ್ಪಡೆಗೊಂಡಿತು. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸುವ ಮೂಲಕ ಮೈತ್ರಿಯನ್ನು ಅಧಿಕೃತಗೊಳಿಸಿದ್ದರು.
ಮೈತ್ರಿ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿಕೆ: ''ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಜಾತ್ಯತೀತತೆಯೇ ತಮ್ಮ ಗುರುತಾಗಿಸಿಕೊಂಡಿರುವ ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ದೊಡ್ಡ ನಿರ್ಧಾರ. ಮೈತ್ರಿ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಮತ್ತು ಇತರ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ಮಾಡಲು ನಾವು ಸ್ವಲ್ಪ ಸಮಯ ಬೇಕಾಗಲಿದೆ. ಹಲವು ವಿಷಯಗಳ ಕುರಿತು ಇನ್ನೂ ಚರ್ಚೆ ನಡೆದಿಲ್ಲ'' ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದರು.
ಇನ್ನು ಇಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಜೆಡಿಎಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಭೇಟಿಯಾಗಿದ್ದು, ಪರಸ್ಪರರು ಅಭಿನಂದಿಸಿಕೊಂಡಿದ್ದಾರೆ. ಜೊತೆಗೆ ಬಿಎಸ್ವೈ ನಿಖಿಲ್ ಮುಂದಿನ ರಾಜಕೀಯ ಜೀವನಕ್ಕೆ ಕೋರಿದ್ದಾರೆ.
ಇದನ್ನೂ ಓದಿ:BJP-JDS alliance: ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ