ಬೆಂಗಳೂರು: ಗೌರವಯುತ ಭಾಷಣ, ಮಾತು, ಚರ್ಚೆಗೆ ವಿಧಾನ ಪರಿಷತ್ ಪಾತ್ರವಾಗುತ್ತದೆ ಎನ್ನುವುದಕ್ಕೆ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಮಾತು ಮತ್ತೊಮ್ಮೆ ಸಾಕ್ಷಿಯಾಯಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಡಿ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ, ತಮ್ಮ ಅನುಭವದ ಪ್ರಬುದ್ಧತೆಯ ಪ್ರದರ್ಶನ ಮಾಡಿದರು. ರಾಜ್ಯದಲ್ಲಿ ಕ್ಯಾನ್ಸರ್ಗೆ ಪ್ರತಿವರ್ಷ ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಇಲ್ಲ. ಇದರತ್ತ ಸರ್ಕಾರ ಗಮನ ಹರಿಸಬೇಕು ಎಂದರು.
ಉತ್ತರ ಕರ್ನಾಟಕ ಭಾಗದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಆಗಿಲ್ಲ. ಸುವರ್ಣ ವಿಧಾನಸೌಧದಲ್ಲಿ ಏನೂ ಬಳಕೆ ಆಗುತ್ತಿಲ್ಲ. 500 ಕೋಟಿ ರೂ. ಇಲ್ಲಿಯವರೆಗೆ ಖರ್ಚು ಮಾಡಲಾಗಿದೆ. ಆದರೆ ಪ್ರಯೋಜನ ಏನು? ಆರಂಭದಿಂದ ಇದುವರೆಗೆ ಕೇವಲ 70 ದಿನ ಮಾತ್ರ ಬಳಸಲಾಗಿದೆ. ಗೋಡೌನ್ ತರ ಬಳಸಲಾಗುತ್ತಿದೆ. ಮನಸ್ಸಿಗೆ ಬಂದಂತೆ ನಿರ್ಮಿಸಲಾಗಿದೆ. ಸಾಕಷ್ಟು ಭ್ರಷ್ಟಾಚಾರ ಆಗಿದೆ. ಸುವರ್ಣ ವಿಧಾನಸೌಧ ಕಟ್ಟಲಾಗಿದೆ ಅಷ್ಟೇ, ಆಮೇಲೆ ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡಿಕೆಯಲ್ಲಿ ಅನ್ಯಾಯವಾಗಿದೆ, ಮಹದಾಯಿ, ನಂಜುಂಡಪ್ಪ ವರದಿ, ಶಿಕ್ಷಣದ ಬಗ್ಗೆ ಚಕಾರ ಎತ್ತಿಲ್ಲ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಬಂದಿದೆ, ಅದರ ನಂತರ ಮುನ್ನೆಚ್ಚರಿಕೆ ಕ್ರಮವನ್ನು ಬೆಳಗಾವಿ ಭಾಗದಲ್ಲಿ ಮಾಡಿಲ್ಲ ಎಂದು ಹೊರಟ್ಟಿ ಹೇಳಿದ್ರು.
17 ಮಂದಿ ಬಂದಿದ್ದರಿಂದ ಸರ್ಕಾರ ರಚಿಸಿದ್ರಿ. ಅವರ ಬಾಯಲ್ಲಿ ಹೇಳಿಸಿದ್ರಿ. ಅವರು ಬಂದು ಸಚಿವರಾದ್ರು, ನಾಲ್ಕು ಅವಧಿಗೆ ಶಾಸಕರಾಗಿ ಆಯ್ಕೆಯಾದವರು ಇನ್ನೂ ಸಚಿರಾಗಿಲ್ಲ. ನೀವು ಬಂದು ಆಪರೇಷನ್ ಕಮಲ ಮಾಡಿದಿರಿ. ಯಾವಾಗ ನೀವು ಬದಲಾಗ್ತೀರಿ ಎಂದು ಪ್ರಶ್ನಿಸಿದರು.
ದೇಶದಲ್ಲಿ ಮೂರ್ನಾಲ್ಕು ಪಕ್ಷಗಳಿವೆ. ಕಾಂಗ್ರೆಸ್ 132 ವರ್ಷ ಹಳೆಯದು. 73 ವರ್ಷಗಳಲ್ಲಿ 54 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ. ಆರು ಸಾರಿ ಪೂರ್ಣ ಪ್ರಮಾಣದ ಅಧಿಕಾರದಲ್ಲಿತ್ತು. ಮೂರು ಬಾರಿ ಮೈತ್ರಿ ಸರ್ಕಾರ ಇತ್ತು. ಬಿಜೆಪಿ ಜನಸಂಘದ ಮೂಲಕ ಬಂತು. ಅಂದು ಅಡ್ವಾಣಿ, ವಾಜಪೇಯಿ ನೀಡಿದ ಕೊಡುಗೆಯನ್ನು ನೀವು ಸ್ಮರಿಸುತ್ತಿಲ್ಲ ಎಂದು ಹೊರಟ್ಟಿ ಹೇಳಿದರು.
ಕಾಂಗ್ರೆಸ್ ಸದಸ್ಯ ಹೆಚ್.ಎಂ. ರೇವಣ್ಣ ಎದ್ದು ನಿಂತು ಸಚಿವರ ಅನುಪಸ್ಥಿತಿಯ ಪ್ರಸ್ತಾಪ ಮಾಡಿದರು. ಎಷ್ಟು ಖರ್ಚಾಗುತ್ತಿದೆ. ಸಚಿವರೇನು ಮೋಜು ಮಜಾ ಮಾಡುವುದಕ್ಕಾ ಎಂದು ಪ್ರಶ್ನಿಸಿದರು. ಎಸ್.ಆರ್. ಪಾಟೀಲ್ ಸಚಿವರ ಪಟ್ಟಿ ಓದಿದರು. ಆಗ ಸಚಿವ ಆರ್. ಅಶೋಕ್ ಸದನಕ್ಕೆ ಆಗಮಿಸಿದರು. ಸಮಜಾಯಿಷಿ ನೀಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಮೂರು ಜನ ಇದ್ದೇವೆ. ಕನಿಷ್ಠ ಕೋರಂ ಇದೆ. ಮಾತು ಮುಂದುವರಿಸಿ ಬರುತ್ತಾರೆ ಎಂದರು. ಅಧಿಕಾರಿಗಳ ಅನುಪಸ್ಥಿತಿಯ ಪ್ರಸ್ತಾಪ ಆಯಿತು. ಅಧಿಕಾರಿಗಳು, ಸಚಿವರು ಇಲ್ಲದ ಹಿನ್ನೆಲೆ ಸದನ ಮುಂದೂಡಿ ಎಂದು ಪ್ರತಿಪಕ್ಷ ಸದಸ್ಯರು ಪ್ರಸ್ತಾಪಿಸಿದರು.
ಮಾತು ಮುಂದುವರಿಸಿದ ಹೊರಟ್ಟಿ, ಸರ್ಕಾರ ರಚನೆ, ಸಂಪುಟ ರಚನೆ, ಆಪರೇಷನ್ ಕಮಲ, ಉಪ ಚುನಾವಣೆ ಮಾಡಿದಿರಿ, ಸರ್ಕಾರ ಮಾಡಿದ ಸಾಧನೆ ವಿವರಿಸಿ. ಏನು ಹೇಳಿಕೊಳ್ಳುವ ಕೆಲಸ ಮಾಡಿದಿರಿ. ಇಬ್ಬರು, ಮೂವರನ್ನು ಉಪಮುಖ್ಯಮಂತ್ರಿ ಮಾಡಿದ್ದು ನೀವೇ. ಈಗ ಆಂಧ್ರಪ್ರದೇಶ ಮಾದರಿಯಲ್ಲಿ ಐದು ಡಿಸಿಎಂ ಮಾಡುವುದು ಶತಸಿದ್ಧ. ಯಡಿಯೂರಪ್ಪ ಮಾಡ್ತಾರೆ, ನೋಡಿ, ನಾನು ಹೇಳಿದ್ದು ಸುಳ್ಳಾದರೆ ಕೇಳಿ. ಅತಿಯಾದ ಪ್ರೀತಿ, ನಂಬಿಕೆ ಒಳ್ಳೆಯದಲ್ಲ. ನಮ್ಮವರನ್ನು ಸಚಿವರನ್ನಾಗಿ ಮಾಡಿ ಎಂದು ಸ್ವಾಮೀಜಿ ಒಬ್ಬರು ಹೇಳ್ತಾರೆ. ಈ ರೀತಿ ಸ್ವಾಮೀಜಿಗಳೆಲ್ಲಾ ವಿಧಾನಸೌಧಕ್ಕೆ ಬರಲಾರಂಭಿಸಿದರೆ, ಪ್ರಭಾವ ಬಳಸಿದರೆ, ನಾವು ರಾಜಕಾರಣಿಗಳು ಮಠಕ್ಕೆ ಹೋಗಬೇಕಾಗುತ್ತದೆ. 13 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಿಲ್ಲ. 28 ಸಚಿವರಿದ್ದೀರಿ, ಖಾಲಿ ಇದ್ದದ್ದೇಕೆ. ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಬೆಳಗಾವಿ ಮುಖ್ಯ ಕಾರಣ. ಅಲ್ಲಿ ನಮ್ಮ ಒಬ್ಬ ಹೀರೋ ಇದಾನೆ ಎಂದು ಹೇಳಿದರು.
ಮಧ್ಯ ಪ್ರವೇಶ ಮಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಬಸವರಾಜ ಹೊರಟ್ಟಿ ಅನುಭವವನ್ನು ಜೆಡಿಎಸ್ ಸಂಪೂರ್ಣವಾಗಿ ಕಡೆಗಣಿಸಿತು ಎಂದಾಗ ತೀವ್ರ ಆಕ್ರೋಶ ಜೆಡಿಎಸ್ ಸದಸ್ಯರಿಂದ ವ್ಯಕ್ತವಾಯಿತು. ಬಿಜೆಪಿಯವರಿಂದ ನನ್ನ ಬಗ್ಗೆ ಅಪಾರ ಕಾಳಜಿ ವ್ಯಕ್ತವಾಯಿತು. ಆದರೆ ನಾನು ನನ್ನ ರಾಜಕೀಯ ಜೀವನವನ್ನು ಇದೇ ಪಕ್ಷದಲ್ಲಿ ಮುಗಿಸುತ್ತೇನೆ. ಬೇರೆ ಕಡೆ ಹೋಗಲು ನನ್ನ ತತ್ವ ಒಪ್ಪಲ್ಲ. ಬಿಜೆಪಿ ನಿಲುವು ನನಗೆ ಇಷ್ಟ ಆಗಲ್ಲ. ಇಂದು ಕೂಡ ಮೂವರು ಡಿಸಿಎಂ ಮಾಡಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಆಗಿದೆ. ಕೋಟ್ಯಂತರ ರೂ. ನಷ್ಟ ಮಾಡುತ್ತಿದ್ದೀರಿ. ಅಧಿಕಾರ ಸಿಕ್ಕಿದೆ ಮಾಡ್ತಿದ್ದೀರಿ ಮಾಡಿ ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಇತರರಿಗೆ ಮಾದರಿ ಆಗಬೇಕು. ಎಂಥೆಂತ ಗಣ್ಯರು ಇಲ್ಲಿ ಬಂದರು. ಅವರ ಗೌರವ ಕಾಯಬೇಕಾಗಿದೆ ಎಂದರು. ಆಗ ಮಾತಿಗಿಳಿದ ಸಚಿವ ಡಾ. ಸುಧಾಕರ್, ಇಂದು ಎರಡೂ ಮನೆಗಳೂ ತಮ್ಮ ಗೌರವ ಕಳೆದುಕೊಂಡಿವೆ. ಗಂಭೀರ ಚರ್ಚೆ ಆಗುತ್ತಿಲ್ಲ. ಯಾವ ರೀತಿ ಚರ್ಚೆ ಆಗಬೇಕು, ಯಾವ ರೀತಿಯ ಬದಲಾವಣೆ ಆಗಬೇಕು. ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆ ಬರಬೇಕು ಎಂದರು. ಅದಕ್ಕೆ ಪ್ರತಿಪಕ್ಷ ಸದಸ್ಯರು ನಿಮ್ಮಲ್ಲಿ ಮೌಲ್ಯ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ಪರ ವಿರೋಧ ವಾಗ್ವಾದ ನಡೆಯಿತು. ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತು. ಸಚಿವ ಸೋಮಣ್ಣ ಕೂಡ ಸದನದ ಗೌರವ ಹೆಚ್ಚಿಸಬೇಕು. ಎರಡು ಸಾರಿ ಆಯ್ಕೆಯಾಗಿದ್ದೆ. ಇದರ ಗೌರವದ ಅರಿವಿದೆ. ಈ ಮನೆ ಈ ಮನೆಯೇ, ಆ ಮನೆ ಆಮನೆಯೇ. ಎರಡೂ ಕಡೆ ಚರ್ಚೆ ಬೇರೆ. ಇಲ್ಲಿನ ಚರ್ಚೆ ವಿಮರ್ಶಾತ್ಮಕವಾಗಿರುತ್ತದೆ. ಉತ್ತಮ ಚರ್ಚೆ ಆಗುತ್ತೆ ಮುಂದುವರಿಯಲಿ ಎಂದರು.
ಮಾತು ಮುಂದುವರಿಸಿದ ಹೊರಟ್ಟಿ, ವಿಧಾನ ಪರಿಷತ್ ಗೌರವದ ವಿಚಾರವಾಗಿ ವಿವರಣೆ ನೀಡಿದರು. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಅಭಿವೃದ್ಧಿಯತ್ತ ಗಮನ ಹರಿಸಿ. ರಾಜ್ಯದಲ್ಲಿ ಹಲವು ಸಮಸ್ಯೆ ಇದ್ದು, ತುರ್ತಾಗಿ ಆಗಬೇಕಾದ ಕೆಲಸಕ್ಕೆ ಗಮನ ಕೊಡಿ. ರೈತರ ಬಗ್ಗೆ ಗಮನ ಹರಿಸಿ. ಜನಪರ ಕೆಲಸ ಮಾಡಿ, ಯುವಕರಿಗೆ ಉದ್ಯೋಗ ಕೊಡಿಸಿ ಎಂದು ಸಲಹೆ ನೀಡಿದರು.
ಮಾರ್ಚ್ 2 ಮುಂದೂಡಿಕೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದನದ ಕಲಾಪವನ್ನು ಮಾರ್ಚ್ 2ವರೆಗೆ ಮುಂದೂಡಿದರು. ಅಂದಿನಿಂದ ಸಂವಿಧಾನದ ಮೇಲಿನ ಚರ್ಚೆ ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ.