ಬೆಂಗಳೂರು:ರಾಜ್ಯವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಇಂದು ತನ್ನ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ 224 ಕ್ಷೇತ್ರಗಳ ಪೈಕಿ 217 ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದಂತೆ, ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ಸೇರಿ ಏಳು ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಸೂಚಿಸಿದೆ.
ಇದೇ ವೇಳೆ ಹಿಂದೆ ಟಿಕೆಟ್ ಘೋಷಣೆ ಮಾಡಿದ್ದ 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬದಲಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಬಂದಿರುವವರಿಗೆ ಮಣೆ ಹಾಕಲಾಗಿದೆ. ಮಂಡ್ಯಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಿದಾಡಿತ್ತು. ನಂತರ ಸ್ವತಃ ಹೆಚ್ಡಿಕೆ ತಾವು ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದರು. ಇದರ ನಡುವೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೆ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ.ಆರ್.ರಾಮಚಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಅದೇ ರೀತಿಯಾಗಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರಕ್ಕೆ ಅಭಿಷೇಕ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಈಗ ಡಾ.ಭಾರತಿ ಶಂಕರ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಆರ್. ಪ್ರಭಾಕರ್ ರೆಡ್ಡಿ ಬದಲಿಗೆ ಈಗ ರಾಜಗೋಪಾಲ ರೆಡ್ಡಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬಳ್ಳಾರಿ ನಗರಕ್ಕೆ ಅಲ್ಲಾಭಕ್ಷ ಮುನ್ನಾ ಬದಲಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾದ ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಟಿಕೆಟ್ ಕೊಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಆದರೆ, ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಜೆಡಿಎಸ್ಗೆ ಸೇರಿರುವ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಮಣೆ ಹಾಕಿದೆ. ಉಳಿದಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪರಮೇಶ್ವರಪ್ಪ ಬದಲಿಗೆ ನೇಮಿರಾಜ ನಾಯ್ಕ್, ಕುಷ್ಟಗಿಯಲ್ಲಿ ತುಕರಾಂ ಸುರ್ವೆ ಬದಲು ಶರಣಪ್ಪ ಕುಂಬಾರ, ಬೀದರ್ ಕ್ಷೇತ್ರದಲ್ಲಿ ರಮೇಶ್ ಪಾಟೀಲ್ ಸೋಲಾಪುರ ಬದಲಿಗೆ ಸೂರ್ಯಕಾಂತ ನಾಗಮಾರಪಲ್ಲಿ, ಬಸವಕಲ್ಯಾಣ ಕ್ಷೇತ್ರದಲ್ಲಿ ಸೈಯದ್ ಯಶ್ರಬ್ ಅಲಿ ಖಾದ್ರಿ ಬದಲಿಗೆ ಸಂಜಯ್ ವಾಡೇಕರ್ ಬಸವನಬಾಗೇವಾಡಿಯಲ್ಲಿ ಪರಮಾನಂದ ಬಸಪ್ಪ ತನಿಖೆದಾರ್ ಬದಲಿಗೆ ಸೋಮನಗೌಡ ಪಾಟೀಲ್, ಚನ್ನಗಿರಿ ಕ್ಷೇತ್ರದಲ್ಲಿ ಎಂ.ಯೋಗೇಶ್ ಬದಲಿಗೆ ತೇಜಸ್ವಿ ಪಟೇಲ್ ಹಾಗೂ ರಾಜಾಜಿನಗರ ಕ್ಷೇತ್ರದಲ್ಲಿ ಗಂಗಾಧರಮೂರ್ತಿ ಬದಲಿಗೆ ಡಾ. ಆಂಜನಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ:ಮತ್ತೊಂದೆಡೆ, ಏಳು ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳಿಗೆ ಜೆಡಿಎಸ್ ಬಾಹ್ಯ ಬೆಂಬಲ ಸೂಚಿಸಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರ, ಬಾಗೇಪಲ್ಲಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದರೆ, ಸಿ.ವಿ.ರಾಮನ್ ನಗರ ಕ್ಷೇತ್ರ, ವಿಜಯನಗರ, ಮಹದೇಪುರ ಕ್ಷೇತ್ರದಲ್ಲಿ ಆರ್ಪಿಐ ಅಭ್ಯರ್ಥಿಗಳಿಗೆ ಬೆಂಬಲ ಪ್ರಕಟಿಸಲಾಗಿದೆ. ನಂಜನಗೂಡು ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಇದನ್ನೂ ಓದಿ:ವಿಧಾನಸಭಾ ಚುನಾವಣೆ: ಜೆಡಿಎಸ್ನ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ