ಬೆಂಗಳೂರು: 2023ಕ್ಕೆ 123 ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾದಳ ಬಾವುಟ ಹಾರಬೇಕು. ಯಾರ ಹಂಗೂ ಇಲ್ಲದ ಪೂರ್ಣ ಜಾತ್ಯಾತೀತ ಜನತಾ ದಳ ಪಟ್ಟಕ್ಕೇರಬೇಕು. ಇದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕನಸು. ಇದು ಕೇವಲ ಕನಸಷ್ಟೇ ಅಲ್ಲ, ಕರ್ನಾಟಕವನ್ನು ಸಮಗ್ರವಾಗಿ ಸಮೃದ್ಧಗೊಳಿಸುವ ಮಹಾ ಸಂಕಲ್ಪ ಕೂಡ ಹೌದು.
2023ರ ಸಾರ್ವತ್ರಿಕ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ಜೆಡಿಎಸ್ ಪಕ್ಷ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ 123 ಕ್ಷೇತ್ರಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಿರುವ ಜೆಡಿಎಸ್ ವರಿಷ್ಠರು, ಸಂಕ್ರಾಂತಿ ಹಬ್ಬಕ್ಕೆ 110 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಆದರೆ, ಮೊದಲ ಪಟ್ಟಿ ಬಿಡುಗಡೆ ಮಾಡುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಸಂಭಾವ್ಯ ಅಭ್ಯರ್ಥಿಗಳಿಗೆ ತರಬೇತಿ ನಡೆಸುವ ಆಲೋಚನೆ ವರಿಷ್ಠರಲ್ಲಿದೆ. ಆದರೆ, ಕೋವಿಡ್ ಹೆಚ್ಚಳದಿಂದ ಸಭೆ, ಸಮಾರಂಭ ನಡೆಸುವುದಕ್ಕೆ ನಿರ್ಬಂಧವಿರುವ ಕಾರಣ ಮತ್ತು ಅಭ್ಯರ್ಥಿಗಳ ಆಯ್ಕೆ ಮಾಡುವ ಕಸರತ್ತು ಅಂತಿಮ ಹಂತದಲ್ಲಿರುವುದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಲು ವರಿಷ್ಠರು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮಿಷನ್ 123 ಹೆಸರಿನಲ್ಲಿ ಚುನಾವಣಾ ತಂತ್ರಗಾರಿಕೆ ಯೋಜನೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ ಜನರ ಸಮಸ್ಯೆಗಳು, ಅದಕ್ಕೆ ಇರುವ ಪರಿಹಾರ, ದೇವೇಗೌಡರು ಸಿಎಂ ಹಾಗೂ ಪ್ರಧಾನಿಯಾಗಿದ್ದ ವೇಳೆ ಜಾರಿಗೆ ತಂದಿದ್ದ ಯೋಜನೆಗಳು.
ಜೆಡಿಎಸ್ ಮೈತ್ರಿ ಸರ್ಕಾರಗಳ ವೇಳೆ ಜಾರಿಗೆ ತಂದ ಯೋಜನೆಗಳು, ಅದರ ಜೊತೆಗೆ ಕೇಂದ್ರ ಸರ್ಕಾರಗಳಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷದ ಅಸ್ಮಿತೆ, ಅಗತ್ಯತೆ ಮತ್ತು ಅನಿವಾರ್ಯತೆಗಳ ಕುರಿತು ಸಂಭಾವ್ಯ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡುವುದು ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಟ್ಟು ಮತದಾರರನ್ನು ಸೆಳೆಯುವ ಕುರಿತು ಜೆಡಿಎಸ್ ಪೂರ್ವ ತಯಾರಿ ಮಾಡಿಕೊಂಡಿದೆ.