ಬೆಂಗಳೂರು: ಬಿಎಂಎಸ್ ಟ್ರಸ್ಟ್ ಅಕ್ರಮ ಆರೋಪ ಸಂಬಂಧ ಇಂದು ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಧರಣಿ ಮುಂದುವರೆಸಿತು. ಬಿಎಂಎಸ್ ಸಾರ್ವಜನಿಕ ಟ್ರಸ್ಟ್ನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಿದ ಸಂಬಂಧ ನಿನ್ನೆ ದಾಖಲೆ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರು.
ಶುಕ್ರವಾರ ಸದನದ ಆರಂಭವಾಗುತ್ತಿದ್ದಂತೆ ಬಾವಿಗಿಳಿದು ಧರಣಿ ನಡೆಸಿದ ಜೆಡಿಎಸ್ ಸದಸ್ಯರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಗಂಭೀರವಾದ ಪ್ರಕರಣ, ಸರ್ಕಾರದ ಅಧಿಕಾರಿಗಳು ಟ್ರಸ್ಟ್ನಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದರು.
ಅಲ್ಲದೇ, ಈ ಬಗ್ಗೆ ಸಚಿವರು ಉತ್ತರ ನೀಡಿಲ್ಲ ಹಾಗೂ ಸರ್ಕಾರವೂ ಉತ್ತರ ನೀಡಿಲ್ಲ. ಸರ್ಕಾರದ ಜವಾಬ್ದಾರಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಆಗಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಜಾರಿಗೆ ತರುವಲ್ಲಿಯೂ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದರು.