ಕರ್ನಾಟಕ

karnataka

ETV Bharat / state

JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ, ಸುದೀರ್ಘ ಪತ್ರದಲ್ಲೇನಿದೆ? - ವಿಶ್ವನಾಥ್

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ ಅವರು, ಮಹಾಚುನಾವಣೆಯ ಫಲಿತಾಂಶ ಪ್ರಕಟವಾದ ಮರುದಿನವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿರುವುದಾಗಿ ಹೇಳಿದ್ರು.

ಹೆಚ್. ವಿಶ್ವನಾಥ್

By

Published : Jun 4, 2019, 1:21 PM IST

Updated : Jun 4, 2019, 5:48 PM IST

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರ ನಡವಳಿಕೆಗಳಿಂದ ಬೇಸರಗೊಂಡ ಹೆಚ್‌. ವಿಶ್ವನಾಥ್‌ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಇಂದು ಸಂಜೆ 4.30ಕ್ಕೆ ಜೆಡಿಎಸ್ ಕಚೇರಿಗೆ ಪಕ್ಷ ನೀಡಿರುವ ಕಾರಿನಲ್ಲಿ ತೆರಳಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಿಸೈನ್‌ ಮಾಡಲು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ದೇವೇಗೌಡರು ಸ್ವಲ್ಪದಿನ ಕಾಯುವಂತೆ ಸಲಹೆ ನೀಡಿದ್ದರು ಎಂದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಹಿಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆಗಲೂ ದೇವೇಗೌಡರು ನನ್ನನ್ನು ಸಮಾಧಾನ ಪಡಿಸಿದ್ದರು ಎಂದು ತಿಳಿಸಿದ್ರು.

ಹೆಚ್. ವಿಶ್ವನಾಥ್
ದೇವೇಗೌಡರಿಗೆ ಸುದೀರ್ಘ ಪತ್ರ ಬರೆದಿರುವ ವಿಶ್ವನಾಥ್, ಜನತಾದಳದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು, ತಮ್ಮ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದು ಭಾವಿಸಿದ್ದೇನೆ. ಕಾಂಗ್ರೆಸ್‍ನಿಂದ ಹೊರಬಂದು ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ಜನ್ಮಕ್ಕೆ ಆಶೀರ್ವದಿಸಿದ್ದೀರಿ ಎಂದು ಗೌಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೈತ್ರಿಯಿಂದ ನಿರೀಕ್ಷಿತ ಸಾಧನೆ ಇಲ್ಲ:

ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ರೈತರ ಸಾಲ ಮನ್ನಾದಂಥ ಬೃಹತ್ ಯೋಜನೆಯನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿಗಳು ಆಡಳಿತದ ಅಭದ್ರತೆಯ ಸಂಕಷ್ಟದಲ್ಲೂ ಜನರ ನಡುವೆ 'ನಮ್ಮ ಕುಮಾರಣ್ಣ' ಎಂಬ ಭಾವನಾತ್ಮಕ ಸಂಪ್ರೀತಿಯಲ್ಲಿದ್ದರು. ಒಂದೆರಡು ಇಲಾಖೆಗಳಲ್ಲಿ ಬಿಟ್ಟರೆ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ ಎಂಬ ವಿಚಾರವನ್ನು ಸಂಕಟವಾದರೂ ಹೇಳುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಅನಾರೋಗ್ಯದ ಮತ್ತು ಮಿತ್ರರ ಕಿರುಕುಳದ ನಡುವೆಯೂ ಎಲ್ಲರ ವಿಶ್ವಾಸದಿಂದ ಶಕ್ತಿಮೀರಿ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿದ್ದು ವಿರುದ್ಧ ಕಿಡಿ:

ಸಮನ್ವಯ ಸಮಿತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಮನ್ವಯ ಸಮಿತಿ, ಕೇವಲ ನಾಮಕಾವಸ್ಥೆ ಸಮನ್ವಯ ಸಮಿತಿ ಆಯಿತೇ ಹೊರತು, ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫಲವಾಗಲೇ ಇಲ್ಲ. ಸಮನ್ವಯ ಸಮಿತಿ ಸುಲಲಿತವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಇದುವರೆಗೂ ರೂಪಿಸಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.

ಹೆಚ್‌. ವಿಶ್ವನಾಥ್‌ ಸುದ್ದಿಗೋಷ್ಠಿ
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಕೈಗೊಂಬೆಯಂತೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಠಿಯಾಯಿತೇ ಹೊರತು, ಸೌಹಾರ್ದಯುತ ವಾತಾವರಣದಲ್ಲಿ ನಿರಾತಂಕವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ಪ್ರಯತ್ನ ನಡೆಯಲಿಲ್ಲ. ಪಕ್ಷದ ಅಧ್ಯಕ್ಷನಾದ ನನಗಾಗಲಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನಾಗಲೀ ಸಮನ್ವಯ ಸಮಿತಿಗೆ ಸೇರಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗೌಡರನ್ನು ಸೋಲಿಸಲು ವ್ಯವಸ್ಥಿತ ಸಂಚು :

ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡರಿಗೆ ವ್ಯವಸ್ಥಿತವಾಗಿ ಖೆಡ್ಡಾ ತೋಡಿ ಸೋಲಿಸಲಾಯಿತು. ಜೋಡೆತ್ತಿನಂತೆ ಇರಬೇಕಾದ ಮೈತ್ರಿ ಪಕ್ಷಗಳು ಆ ರೀತಿ ಇರಲೇ ಇಲ್ಲ. ಮೈಸೂರಿನಿಂದ ಸ್ಪರ್ಧಿಸುವಂತೆ ಕೋರಿದರು, ಅದು ಕಾಂಗ್ರೆಸ್ ಷಡ್ಯಂತ್ರದಿಂದ ಸಾಧ್ಯವಾಗಲಿಲ್ಲ. ಕಾಂಗ್ರೆಸ್​​ನ ನಾಯಕರ ಕೊಂಕು ಮಾತುಗಳಿಂದ ಅಹಿಂದ ಮತಗಳು ಚದುರಿಹೋಗಿ, ಜೆಡಿಎಸ್​ಗೆ ಸೋಲು ಉಂಟಾಯಿತು. ಈ ಎಲ್ಲಾ ಕಾರಣಗಳಿಂದ ನಾನು ಬೇಸತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾರಣ ನೀಡಿದರು.

ಜೆಡಿಎಸ್‌ ಬಿಡಲ್ಲ:

ಮುಂದೆ ಪಕ್ಷದಲ್ಲಿ ಇದ್ದುಕೊಂಡೇ ಹುಣಸೂರು ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಬೇಡ ಅನ್ನೋದಿಲ್ಲ. ಆದರೆ, ಮಂತ್ರಿ ಸ್ಥಾನ ಕೇಳಿಕೊಂಡು ನಾನಾಗಿ ಯಾರ ಬಳಿಯೂ ಹೋಗುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದೆ. ನಾನ್ಯಾಕೆ ಬಿಜೆಪಿಗೆ ಹೋಗಲಿ. ನಾನು ಬಿಜೆಪಿಗೆ ಹೋಗಲ್ಲ ಎಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Last Updated : Jun 4, 2019, 5:48 PM IST

For All Latest Updates

ABOUT THE AUTHOR

...view details