ಬೆಂಗಳೂರು: ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಕೆ.ಗೋಪಾಲಯ್ಯ ಪತ್ನಿ, ಮಾಜಿ ಉಪಮೇಯರ್ ಹೇಮಲತಾ ಸೇರಿ ಮೂವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಜೆಡಿಎಸ್ನಿಂದ ಮೂವರ ಉಚ್ಛಾಟನೆ.. ಹೆಚ್ ಕೆ ಕುಮಾರಸ್ವಾಮಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅವರು, ಪಾಲಿಕೆ ಸದಸ್ಯರಾದ ವೃಷಭಾವತಿನಗರ ವಾರ್ಡ್ನ ಹೇಮಲತಾ ಗೋಪಾಲಯ್ಯ, ಮಾರಪ್ಪನಪಾಳ್ಯ ವಾರ್ಡ್ನ ಸದಸ್ಯ ಎಂ.ಮಹಾದೇವ್ ಹಾಗೂ ಪಾಲಿಕೆ ಮಾಜಿ ಸದಸ್ಯ, ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಮಾಜಿ ಅಧ್ಯಕ್ಷ ಎನ್. ಜಯರಾಮ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಉಚ್ಛಾಟಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉಪಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು,ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯನವರು ನಮ್ಮ ಅಭ್ಯರ್ಥಿ ಹಾಗೂ ಜೆಡಿಎಸ್ನ ಕೆಲ ಮುಖಂಡರನ್ನು ಆಮಿಷ ಒಡ್ಡುವುದರ ಮೂಲಕ ಪಕ್ಷಕ್ಕೆ ಸೆಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಬಸವೇಶ್ವರನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಗೋಪಾಲಯ್ಯನವರು ಸೋಲುವ ಭೀತಿಯಿಂದ ಹೆದರಿಸಿ ಬೆದರಿಸಿ ನಮ್ಮ ಪಕ್ಷದ ಮುಖಂಡರನ್ನು ಬಲವಂತವಾಗಿ ಸೇರ್ಪಡೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜವರಾಯಿಗೌಡ ಅವರನ್ನು ಬಿಜೆಪಿಗೆ ಆಹ್ವಾನ ನೀಡಿದ್ದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಬಲಿಷ್ಠರಾಗಿದ್ದಾರೆ ಅಂತಾ ಬಿಜೆಪಿಗೆ ಅರ್ಥ ಆಗಿದೆ. ಹೀಗಾಗಿ ಬಿಜೆಪಿ ಅವರನ್ನು ಆಪರೇಶನ್ ಮಾಡಲು ಯತ್ನಿಸಿರಬಹುದು. ಜವರಾಯಿಗೌಡರನ್ನು ಹಿಂದೆ ಸರಿಸಿದರೆ, ಸುಲಭವಾಗಿ ಗೆಲ್ಲಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಜವರಾಯಿಗೌಡ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರು ಚುನಾವಣಾ ಕಣದಲ್ಲೇ ಇರುತ್ತಾರೆ. ಅವರೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.