ಬೆಂಗಳೂರು :ಜೆಡಿಎಸ್ನ ಯುವ ನಾಯಕ, ನಟ ನಿಖಿಲ್ ಕುಮಾರಸ್ವಾಮಿ ಅವರು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯುವ ಜನತಾದಳ ಹಾಗೂ ವಿದ್ಯಾರ್ಥಿ ಜನತಾದಳ ವಿಭಾಗಗಳ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಒಳಗೊಂಡ ಮುಖಂಡರ ಸಭೆಯನ್ನು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜ.4ರಂದು ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜನತಾದಳ (ಜಾತ್ಯತೀತ) ಮೈತ್ರಿ ಸರ್ಕಾರ 2019ನೇ ಜುಲೈ ತಿಂಗಳಲ್ಲಿ ಅಧಿಕಾರ ಕಳೆದಕೊಂಡ ನಂತರ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ವಿದ್ಯಾಮಾನಗಳ ಬಗ್ಗೆ ನಮ್ಮ ಪಕ್ಷದ ಎಲ್ಲಾ ಯುವ ಮುಖಂಡರಿಗೆ ಅರಿವಿದೆ ಎಂದು ಭಾವಿಸುತ್ತೇವೆ.
ಇದಲ್ಲದೇ, ರಾಜ್ಯದಲ್ಲಿ ಅಧಿಕಾರ ರೂಢವಾಗಿರುವ ಬಿಜೆಪಿ ಸರ್ಕಾರ ರಾಜಕೀಯ ಹಗೆತನ, ದ್ವೇಷ ಮತ್ತು ದುರಾಡಳಿತದಿಂದ ಜನಸಾಮಾನ್ಯರ, ರೈತರ ಮತ್ತು ಕೂಲಿ ಕಾರ್ಮಿಕರ ಜೀವನವನ್ನು ಹದಗೆಡಿಸಿದೆ. ಅಲ್ಲದೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ತಿನ 4 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ.
ಈ ಮೇಲಿನ ಅಂಶಗಳ ಹಿನ್ನೆಲೆ ಪಕ್ಷವನ್ನು ಬಲವರ್ಧನೆಗೊಳಿಸಲು, ಪಕ್ಷದ ಸಂಘಟನೆಯನ್ನು ಎಲ್ಲಾ ಹಂತಗಳಲ್ಲಿ ಕೈಗೊಳ್ಳುವುದು ಅವಶ್ಯಕ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹಾಗೂ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆ ಪಕ್ಷದ ಸಂಘಟನೆ ಬಗ್ಗೆ ಪಕ್ಷದ ಯುವ ಜನತಾದಳ ಮತ್ತು ವಿದ್ಯಾರ್ಥಿ ಜನತಾದಳ, ಯುವ ಮುಖಂಡರು, ವಿದ್ಯಾರ್ಥಿ ಮುಖಂಡರು ಪಕ್ಷವನ್ನು ಕಟ್ಟಲು ಸಕ್ರಿಯರಾಗುವ ಅಗತ್ಯವಿದೆ. ಹಾಗಾಗಿ, ಎಲ್ಲರೂ ಸಭೆಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ. ಈ ಸಂಘಟನಾ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾರ್ಗದರ್ಶನ ನೀಡಲಿದ್ದಾರೆ.