ಕರ್ನಾಟಕ

karnataka

ETV Bharat / state

ಒಂದೆಡೆ ಮೈತ್ರಿಗೆ ವಿರೋಧ, ಮತ್ತೊಂದೆಡೆ ಪಕ್ಷದ ಪುನಶ್ಚೇತನಕ್ಕೆ ಜೆಡಿಎಸ್ ಸಿದ್ಧತೆ - ಈಟಿವಿ ಭಾರತ್ ಕನ್ನಡ ಸುದ್ದಿ

ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಪಕ್ಷಗಳ​ ಮೈತ್ರಿಗೆ ಎರಡೂ ಪಕ್ಷಗಳಲ್ಲೂ ಅಸಮಾಧಾನ ಭುಗಿಲೆದ್ದಿದೆ.

ಜೆಡಿಎಸ್
ಜೆಡಿಎಸ್

By ETV Bharat Karnataka Team

Published : Oct 6, 2023, 3:54 PM IST

ಬೆಂಗಳೂರು : ಒಂದೆಡೆ ಜೆಡಿಎಸ್-ಬಿಜೆಪಿ ಮೈತ್ರಿಗೆ ಎರಡೂ ಪಕ್ಷಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಪುನಶ್ಚೇತನಕ್ಕೆ ಜೆಡಿಎಸ್ ಮುಂದಾಗಿದೆ. ಜೆಡಿಎಸ್​ನ ಕೋರ್ ಕಮಿಟಿ ಆರಂಭಿಸಿರುವ ಪಕ್ಷದ ಪುನಶ್ಚೇತನ ಪರ್ವದ ಎರಡನೇ ಕಾರ್ಯಕ್ರಮವನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಅಕ್ಟೋಬರ್ 11 ರಿಂದ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.

ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದ ಕೋರ್ ಕಮಿಟಿಯು ಪಕ್ಷದ ಪುನರ್‌ಸಂಘಟನೆಗಾಗಿ ರಾಜ್ಯ ಪ್ರವಾಸ ಆರಂಭಿಸಿದ್ದು, ವಿಭಾಗವಾರು ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಂಡಿತ್ತು. ಎರಡನೇ ಹಂತದಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲು ಉದ್ದೇಶಿಸಲಾಗಿದೆ.

ಅಕ್ಟೋಬರ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರು, ಸ್ಥಳೀಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಪಕ್ಷದ ಪದಾಧಿಕಾರಿಗಳು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪಕ್ಷದ ಮುಖಂಡರ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪಕ್ಷದ ಪುನರ್‌ಸಂಘಟನೆಗೆ ಸಂಬಂಧಿಸಿದಂತೆ ಕೋರ್ ಕಮಿಟಿಯು ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಜೆಡಿಎಸ್​ನ ಉನ್ನತ ಮೂಲಗಳು ತಿಳಿಸಿವೆ.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಭೆಯನ್ನು ವಿಜಯಪುರದಲ್ಲಿ ಅ. 11 ರಂದು ಆಯೋಜಿಸಲಾಗುತ್ತಿದೆ. ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ಸಭೆಯನ್ನು ಅ.12ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಿದ್ದು, ಬೆಳಗಾವಿ ವಿಭಾಗದ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್​ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಭೆಗಳನ್ನು ನಡೆಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಸಲಹೆ, ಸೂಚನೆ ಪಡೆಯಲಾಗಿದೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೋರ್ ಕಮಿಟಿಯು ಪಕ್ಷದ ಪುನಶ್ಚೇತನ ಹಾಗೂ ಪದಾಧಿಕಾರಿಗಳ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ. ಆ ನಂತರ ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ ಪಕ್ಷದ ವರಿಷ್ಠರು ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈತ್ರಿಗೆ ಎಸ್.ಟಿ.ಸೋಮಶೇಖರ್ ವಿರೋಧ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೈತ್ರಿಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮುಖಂಡರು ರಾಜೀನಾಮೆ ನೀಡಿದ್ದಾರೆ. ಇದನ್ನು ಕೋರ್ ಕಮಿಟಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಅದೇ ರೀತಿ ಬಿಜೆಪಿಯಲ್ಲೂ ಅಸಮಾಧಾನವಿದ್ದು, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜೆಡಿಎಸ್ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮೈತ್ರಿ ಮಾಡಿಕೊಂಡ ನಂತರ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ABOUT THE AUTHOR

...view details