ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸ್ವಂತ ಬಲದ ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿರುವ ಜೆಡಿಎಸ್, ಪಂಚರತ್ನ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಚುನಾವಣಾ ಕಣಕ್ಕಿಳಿದಿರುವ ಜೆಡಿಎಸ್, ಮೈಸೂರಿನಿಂದ ಪಂಚರತ್ನ ಯಾತ್ರೆ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಈ ಯಾತ್ರೆಗೆ ರೂಟ್ ಮ್ಯಾಪ್ ಸಿದ್ಧವಾಗಿದೆ. ಇದರ ಪೂರ್ವಭಾವಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸದ್ಯದಲ್ಲೇ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಭೆ ನಡೆಯಲಿದೆ.
ಜನತಾ ಜಲಧಾರೆ ಮಾದರಿಯಲ್ಲಿ ಜಿಲ್ಲೆ, ವಿಧಾನಸಭೆ ಕ್ಷೇತ್ರ, ತಾಲೂಕು ಮತ್ತು ವಲಯ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತದೆ. ಪೂರ್ವಭಾವಿ ಸಭೆ ನಂತರ ಪಂಚರತ್ನ ರಥ ಯಾತ್ರೆ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ. ಬಿಬಿಎಂಪಿ ಚುನಾವಣೆ, 2023ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ಯಾತ್ರೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೃಷಿ, ನೀರಾವರಿ, ಉದ್ಯೋಗ, ವಸತಿ ಹಾಗೂ ಯುವ ಮತ್ತು ಮಹಿಳಾ ಸಬಲೀಕರಣ ಇವು ಜೆಡಿಎಸ್‌ನ ಪಂಚರತ್ನ ಕಾರ್ಯಕ್ರಮಗಳು.
2023ರ ಚುನಾವಣೆಯಲ್ಲಿ ಈ ಅಂಶಗಳೇ ಜೆಡಿಎಸ್‌ನ ಚುನಾವಣಾ ಪ್ರಣಾಳಿಕೆಯ ವಿಷಯಗಳಾಗಿವೆ. ಈ ಅಂಶಗಳನ್ನು ಜನರ ಮುಂದೆ ಪ್ರಚಾರ ಮಾಡಲು ಪಂಚರತ್ನ ರಥ ಯಾತ್ರೆ ರೂಪಿಸಲಾಗಿದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಿಂದ ರಥ ಯಾತ್ರೆ ಆರಂಭಿಸುವ ಸಾಧ್ಯತೆಗಳಿವೆ. ಈ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಶಾಸಕರಿಗೆ ಜವಾಬ್ದಾರಿ:ಪಂಚರತ್ನ ಯಾತ್ರೆಯ ಉಸ್ತುವಾರಿಯನ್ನು ಶಾಸಕರಿಗೆ ವಹಿಸಲಾಗುತ್ತದೆ. ಜೆಡಿಎಸ್ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಅಧ್ಯಕ್ಷರು, ಮುಖಂಡರಿಗೆ ಹೊಣೆಗಾರಿಕೆ ನೀಡಲು ನಿರ್ಧರಿಸಲಾಗಿದೆ. ನಾಲ್ಕು ಹಂತಗಳಲ್ಲಿ ಈ ರಥ ಯಾತ್ರೆಯ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಮೊದಲ ಹಂತದಲ್ಲಿ ಮೈಸೂರು ವಿಭಾಗದ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಯಾತ್ರೆ ಶುರುವಾಗಲಿದೆ.
ಈ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಪಕ್ಷದ ಪ್ರಮುಖ ನಾಯಕರು ಸದ್ಯದಲ್ಲೇ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಸೆಪ್ಟೆಂಬರ್ 1ರಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಆಗಮನ