ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 'ಕಿಂಗ್ ಮೇಕರ್' ನಿರೀಕ್ಷೆಯಲ್ಲಿದ್ದ ಜೆಡಿಎಸ್ ಬಯಕೆಗೆ ರಾಜ್ಯದ ಮತದಾರ ಪ್ರಭುಗಳು ತಣ್ಣೀರೆರೆಚಿದ್ದಾರೆ. ಈ ಬಾರಿ ಕೂಡ ಅತಂತ್ರ ಫಲಿತಾಂಶ ಬರುತ್ತದೆ ಎಂದು ಕೆಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಅಂತೆಯೇ, ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಜೆಡಿಎಸ್ ಬೆಂಬಲ ಅನಿವಾರ್ಯವಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ಗೆ ಸ್ಪಷ್ಟ ಬಹುಮತವನ್ನು ಜನತೆ ನೀಡಿದ್ದಾರೆ. ಇದೇ ವೇಳೆ ಜೆಡಿಎಸ್ಗೆ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ನೀಡುವ ಮೂಲಕ ಆಘಾತ ನೀಡಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 217 ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಆರ್ಪಿಐ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಘೋಷಿಸಿತ್ತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪುತ್ರ ದರ್ಶನ ಧ್ರುವನಾರಾಯಣ ಅವರಿಗೆ ಪಕ್ಷ ಬೆಂಬಲ ಪ್ರಕಟಿಸಿತ್ತು. ಆದರೆ, ತಾನು ಸ್ಪರ್ಧಿಸಿದ್ದ 217 ಕ್ಷೇತ್ರಗಳಲ್ಲಿ 19 ಕಡೆ ಮಾತ್ರ ಗೆಲುವು ಸಾಧಿಸುವಲ್ಲಿ ತೆನೆ ಪಕ್ಷ ಶಕ್ತವಾಗಿದೆ. ಕಳೆದ ಬಾರಿ 37 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ತನ್ನ ಬಲ ಪ್ರದರ್ಶಿಸಿತ್ತು. ಆದರೆ, 18 ಕ್ಷೇತ್ರಗಳನ್ನು ಕಳೆದುಕೊಂಡು ದಳ ಹೀನಾಯ ಸ್ಥಿತಿಗೆ ಸಿಲುಕಿದೆ.