ಬೆಂಗಳೂರು :ರಾಜ್ಯದಲ್ಲಿ ಶತಾಯ-ಗತಾಯ ಪಕ್ಷವನ್ನು ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ತರಲೇಬೇಕೆಂಬುದು ಜೆಡಿಎಸ್ ಕನಸು. ಅದಕ್ಕಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೊಡಗಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿ ಪಕ್ಷದಿಂದ ಹೊರ ಬೀಳುತ್ತಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಿಂದ ಹಲವು ಮುಖಂಡರು ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಜೆಡಿಎಸ್ನ ವಿಷನ್-2023ರ ಕನಸಿಗೆ ಪೆಟ್ಟು ಬೀಳುವ ಮುನ್ಸೂಚನೆ ಕಾಣಿಸುತ್ತಿದೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಗೌಡ ಮಾಲಿ ಪಾಟೀಲ್ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲ ತುಂಬಿದ್ದ ಎಂ ಸಿ ಮನಗೂಳಿ ನಿಧನರಾಗಿದ್ದು, ತಂದೆ ನಿಧನ ನಂತರ ಅಶೋಕ್ ಮನಗೂಳಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನು, ಮಧು ಬಂಗಾರಪ್ಪ ಸಹ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ನಾಯಕರ ಬಗ್ಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಸಹ ತಟಸ್ಥರಾಗಿದ್ದು, ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲೇ ಹರಿದಾಡುತ್ತಿದೆ.
ಅದೇ ರೀತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ್ದ ಜಿ ಟಿ ದೇವೇಗೌಡ ಅವರು ಜೆಡಿಎಸ್ ನಾಯಕರ ವಿರುದ್ಧ ಮುನಿಸಿಕೊಂಡು ತಟಸ್ಥರಾಗಿದ್ದಾರೆ. ಜೆಡಿಎಸ್‌ನಲ್ಲೇ ಉಳಿಯಬೇಕೋ, ಬಿಜೆಪಿ ಅಥವಾ ಕಾಂಗ್ರೆಸ್ಗೆ ಹೋಗಬೇಕೋ ಎಂಬ ಜಿಜ್ಞಾಸೆಯಲ್ಲಿ ಅವರಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಪತನ ಸಂದರ್ಭ ಬಿ.ಎಸ್.ಯಡಿಯೂರಪ್ಪ ಅಪರೇಷನ್ ಆಡಿಯೋ ಬಾಂಬ್ ಸಿಡಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಕಂದಕೂರು ಕೂಡ ತಟಸ್ಥರಾಗಿದ್ದಾರೆ. ಜೆಡಿಎಸ್ ಯುವ ಘಟಕಕ್ಕೆ ಅಧ್ಯಕ್ಷರನ್ನಾಗಿ ಶರಣಗೌಡರನ್ನು ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಇದರಿಂದ ಬೇಸರಗೊಂಡು ಶರಣಗೌಡ ಅಂತರ ಕಾಯ್ದುಕೊಂಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ.
ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತ ಕುಮಾರಸ್ವಾಮಿ ಅವರು ಇದೀಗ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಪಕ್ಷದ ಸಂಘಟನೆಗಿಂತ ಇತ್ತೀಚೆಗೆ ವಿವಾದಿತ ಹೇಳಿಕೆಗಳು ಹಾಗೂ ಟ್ವೀಟ್ ವಾರ್ನಿಂದಲೇ ಜೆಡಿಎಸ್ ಸದ್ದು ಮಾಡುತ್ತಿದೆ. ಇದರ ಮಧ್ಯೆ ಜೆಡಿಎಸ್ ನಾಯಕರು ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧ ತಾರಕಕ್ಕೇರಿ, ದ್ವೇಷ ರಾಜಕಾರಣಕ್ಕೆ ತಿರುಗಿದೆ. ಸುಮಲತಾ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಡಿದ ಮಾತು ಜೆಡಿಎಸ್‌ಗೆ ಮುಳುವಾಗಿ ಪರಿಣಮಿಸುತ್ತಿದೆ.