ಬೆಂಗಳೂರು:ಕುಮಾರಕೃಪ ಅತಿಥಿ ಗೃಹದಲ್ಲಿ ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂಬ ವಿಚಾರದ ಕುರಿತು ಜೆಡಿಎಸ್ ಪಕ್ಷ ಟ್ವೀಟ್ ಮಾಡಿದ್ದು, ಆಕಸ್ಮಿಕವಾಗಿ ಭೇಟಿ ಮಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದೆ.
ಕುಮಾರಕೃಪ ಅತಿಥಿ ಗೃಹಕ್ಕೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ವೇಳೆ ಸಚಿವ ಸಾ.ರಾ.ಮಹೇಶ್ ಅವರು ಆಕಸ್ಮಿಕವಾಗಿ ಈಶ್ವರಪ್ಪ, ಮುರಳೀಧರ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮೈತ್ರಿ ಪಕ್ಷ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರೆಸಲಿದೆ ಎಂದು ಟ್ವೀಟ್ನಲ್ಲಿ ಪಕ್ಷ ತಿಳಿಸಿದೆ.