ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರೋಧದ ನಡುವೆಯೂ ರೇವಣ್ಣ ದಂಪತಿಗಳ ಒತ್ತಡಕ್ಕೆ ಮಣಿದು ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಲು ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಭವಾನಿ ರೇವಣ್ಣ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆನ್ನುವುದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಈಗ ಜಿಜ್ನಾಸೆ ಮೂಡಿದೆ. ಹಾಸನ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಭವಾನಿಯವರು ಹೆಚ್ಚಿನ ಆಸಕ್ತಿ ಹೊಂದಿದ್ದು, ಚುನಾವಣೆ ಸಂಬಂಧ ಮತದಾರರನ್ನು ಭೇಟಿ ಮಾಡಿ ಪ್ರಚಾರ ಕಾರ್ಯದಲ್ಲಿ ಈಗಾಗಲೇ ತೊಡಗಿದ್ದಾರೆ. ಅಷ್ಟೇ ಅಲ್ಲ, ಸ್ಪರ್ಧೆಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪೂಜೆ ಪುನಸ್ಕಾರ ಮಾಡುತ್ತ ಟೆಂಪಲ್ರನ್ನಲ್ಲಿ ತೊಡಗಿದ್ದಾರೆ.
ಹಾಸನ ಬದಲು ಬೇರೆ ಸೂಕ್ತ ಕ್ಷೇತ್ರದಲ್ಲಿ ಭವಾನಿ ರೇವಣ್ಣನವರನ್ನು ಸ್ಪರ್ಧೆಗಿಳಿಸುವುದರ ಕುರಿತು ದಳಪತಿಗಳ ಮನೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಭವಾನಿ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಸನದ ಬದಲಿಗೆ ಹೊಳೆನರಸೀಪುರ ಅಥವಾ ಕೆ ಆರ್ ಪೇಟೆಯಲ್ಲಿ ಕಣಕ್ಕಿಳಿಯುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಕಮಲದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಡಾ.ನಾರಾಯಣಗೌಡರನ್ನು ಸೋಲಿಸಲು ಪ್ರಬಲ ಅಭ್ಯರ್ಥಿ ಅಗತ್ಯವಿದ್ದು ಕೆ.ಆರ್ ಪೇಟೆಯಲ್ಲಿ ಚುನಾವಣೆಗೆ ನಿಲ್ಲುವುದು ಉತ್ತಮ ಎಂದು ಹೆಚ್ಡಿಕೆ ಹೇಳುತ್ತಿದ್ದಾರಂತೆ. ಹಾಸನದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಪಕ್ಷದ ಸ್ಥಳೀಯ ಕಾರ್ಯಕರ್ತ ಸ್ವರೂಪ್ಗೆ ಟಿಕೆಟ್ ಕೊಟ್ಟು, ಹಾಸನ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಭವಾನಿ ರೇವಣ್ಣ ಅವರನ್ನು ಪತಿ ರೇವಣ್ಣ ಕ್ಷೇತ್ರವಾಗಿರುವ ಹೊಳೆನರಸೀಪುರದಲ್ಲಿ ಕಣಕ್ಕಿಳಿಸುವ ಕುರಿತು ಸಮಾಲೋಚನೆ ನಡೆದಿದೆ.
ಹೊಳೆನರಸೀಪುರ ಕ್ಷೇತ್ರವನ್ನು ಪತ್ನಿಗೆ ಬಿಟ್ಟುಕೊಡುವ ರೇವಣ್ಣಗೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ಗೆ ಕೈಕೊಟ್ಟಿರುವ ಸಚಿವ ನಾರಾಯಣ ಗೌಡರ ವಿರುದ್ಧ ನಿಲ್ಲಿಸುವ ಸಾಧ್ಯತೆಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಹೊಳೆನರಸೀಪುರ ಕ್ಷೇತ್ರವನ್ನು ಪತ್ನಿ ಭವಾನಿಯವರಿಗೆ ಬಿಟ್ಟುಕೊಡಲು ರೇವಣ್ಣನವರಿಗೆ ಹೆಚ್ಚು ಒಲವಿಲ್ಲ ಎಂದು ಗೊತ್ತಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಒತ್ತಡ ಹಾಕುತ್ತಿದ್ದು, ಹಾಸನದಲ್ಲಿಯೇ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ರೇವಣ್ಣ ಕುಟುಂಬದಿಂದ ಮುಂದುವರಿದಿದೆ.
ಕುಮಾರಸ್ವಾಮಿ ಲೆಕ್ಕಾಚಾರವೇನು..?: ವಿಧಾನಸಭೆ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುವುದಕ್ಕೆ ತೀವ್ರ ಆಕ್ಷೇಪವೆತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರ ಸ್ಪರ್ಧೆ ತಡೆಯುವ ಉದ್ದೇಶದಿಂದಲೇ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ಸ್ಥಗಿತಗೊಳಿಸಿ ಮಗ ನಿಖಿಲ್ ಕುಮಾರಸ್ವಾಮಿಯವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಶಾಸಕಿಯಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ತಾವು ಸಹ ಶಾಸಕರಾಗಬೇಕು ಎಂದು ಪಟ್ಟು ಹಿಡಿದಿದ್ದರಿಂದ ವಿಧಾನಸಭೆ ಪ್ರವೇಶಿಸುವುದನ್ನು ತಡೆಗಟ್ಟಲು ಕುಮಾರಸ್ವಾಮಿ ಅವರು ತಮ್ಮ ಪತ್ನಿಯನ್ನೇ ಚುನಾವಣಾ ಕಣದಿಂದ ನಿವೃತ್ತಿಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.