ಬೆಂಗಳೂರು: ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡವೆಂದು ಭಾವಿಸಿದ್ದೆ. ನಾನು ಚುನಾವಣೆಯಲ್ಲಿ ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಕೂಡಾ ಅವರಿಗೆ ಇದ್ದಂತಿಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ ವಿಸರ್ಜನೆ ಮಾಡುತ್ತಾರೆ? ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ? ಎಂದು ಕೆಲವು ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರೆಲ್ಲರ ಅಜ್ಞಾನಕ್ಕೆ ನನ್ನ ಪ್ರಗಾಢ ಸಾಂತ್ವನವಿದೆ. ಅವರ ಕನ್ನಡ ಭಾಷಾಜ್ಞಾನದ ಬಗ್ಗೆ ಕಾಳಜಿ ಇದೆ. ಆ ಮಹಾಶಯರು ನನ್ನ ಹೇಳಿಕೆಗಳನ್ನೊಮ್ಮೆ ತಿಳಿಯಲಿ. ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ಕನ್ನಡ ಓದಲು ಬಾರದಿದ್ದರೆ ನನ್ನ ಬಳಿ ಬರಲಿ, ಮನದಟ್ಟು ಆಗುವ ರೀತಿ ಹೇಳುತ್ತೇನೆ. ಕನ್ನಡವನ್ನೂ ಕಲಿಸುತ್ತೇನೆ ಎಂದಿದ್ದಾರೆ.
ನನಗೆ 123 ಕ್ಷೇತ್ರಗಳನ್ನು ಕೊಟ್ಟರೆ ನಾನು ಭರವಸೆ ಕೊಟ್ಟಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ಆಮೇಲೆ ಎಂದೂ ವೋಟು ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ ಎಂದು ಜನರಿಗೆ ಹೇಳಿದ್ದು ಹೌದು. ಚುನಾವಣೆ ಫಲಿತಾಂಶ ಬಂದಿದೆ, ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟು ಅವಿವೇಕವುಳ್ಳ ಇವರ ಮುಂದಿನ ಆಡಳಿತದ ಈಗಲೇ ಆತಂಕವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.