ಬೆಂಗಳೂರು: ಮುಂಬರುವ ಚುನಾವಣೆಗೆ ತಯಾರಿ ನಡೆಸಿರುವ ಜೆಡಿಎಸ್ ನಾಯಕರು ನ.1 ರಂದು ಚಾಲನೆ ನೀಡಿದ್ದ ಪಂಚರತ್ನ ರಥಯಾತ್ರೆಯನ್ನು ಮಳೆಯಿಂದಾಗಿ ಮುಂದೂಡಿದ್ದರು. ಇದೀಗ ನ.14 ರಿಂದ ಜೆಡಿಎಸ್ನ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ.
ಈಗಾಗಲೇ ನಿಗದಿಯಾಗಿರುವಂತೆ ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾಕ್ಷೇತ್ರದಿಂದ ಈ ರಥಯಾತ್ರೆ ಪ್ರಾರಂಭವಾಗಲಿದ್ದು, ಡಿ.6ರವರೆಗೂ ನಿರಂತರವಾಗಿ ನಡೆಯಲಿದೆ. ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ನ.1ರಂದು ಈ ಯಾತ್ರೆಯನ್ನು ಪ್ರಾರಂಭಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿತ್ತು. ಆದರೆ, ಮಳೆ ಬಂದ ಕಾರಣ ಒಂದು ವಾರಗಳ ಕಾಲ ಪಂಚರತ್ನ ರಥಯಾತ್ರೆಯನ್ನು ಮುಂದೂಡಲಾಗಿತ್ತು. ಈಗ ಮಳೆ ಬಿಡುವು ಕೊಟ್ಟಿರುವುದರಿಂದ ಮೊದಲ ಹಂತದ ರಥ ಯಾತ್ರೆ ನ.14 ರಿಂದ ಪ್ರಾರಂಭವಾಗಲಿದೆ.
ರಥ ಯಾತ್ರೆಗೆ ಚಾಲನೆ ನೀಡಿದ ನಂತರ ಬೃಹತ್ ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಸಂಭವನೀಯ ಅಭ್ಯರ್ಥಿಗಳಿಂದ ಜೆಡಿಎಸ್‍ನಿಂದ ಸ್ಪರ್ಧಿಸಿ ಚುನಾಯಿತರಾದ ಮೇಲೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣವಚನ ಸ್ವೀಕರಿಸಲಾಗುತ್ತದೆ.