ಬೆಂಗಳೂರು: ಈ ಬಾರಿಯ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಜೆಡಿಎಸ್ ತಮ್ಮ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿರುವ ಗಮನ ಸೆಳೆದಿದೆ. ಅಲ್ಲದೆ, ಜಾತ್ಯತೀತ ಜನತಾದಳ ಮೊದಲ ಹಂತದ ಪಂಚರತ್ನ ರಥಯಾತ್ರೆ ಯಶಸ್ಸಿನ ಗುಂಗಿನಲ್ಲೇ ಎರಡನೇ ಹಂತದ ರಥಯಾತ್ರೆಗೆ ಜೆಡಿಎಸ್ ಸಿದ್ದತೆ ನಡೆಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್, ಮೊದಲ ಹಂತದ ಪಂಚರತ್ನ ರಥಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೇ ಹಂತದ ರಥಯಾತ್ರೆಗೆ ತಯಾರಿ ನಡೆಸಿದೆ.
ಎರಡನೇ ಹಂತದ ಪಂಚರತ್ನ ರಥಯಾತ್ರೆಗೆ ಜನವರಿ 5 ರಿಂದ ಬೀದರ್ ನಿಂದ ಚಾಲನೆ ಸಿಗಲಿದ್ದು, ರಥಯಾತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದೆ. ನಂತರ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರನೇ ಹಂತದ ಪಂಚರತ್ನ ರಥಯಾತ್ರೆ ಜರುಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮೊದಲ ಹಂತದ ರಥಯಾತ್ರೆ 35 ಕ್ಷೇತ್ರದಲ್ಲಿ ಕೈಗೊಳ್ಳಲಾಗಿತ್ತು. ಈ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಹುಮ್ಮಸ್ಸಿನಲ್ಲಿ ಎರಡನೇ ಹಂತಕ್ಕೆ ಸಿದ್ಧತೆ ಕೈಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಗೊಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಜೆಡಿಎಸ್ ಮಾಡಲಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ರಥಯಾತ್ರೆಗೆ ಎರಡನೇ ಹಂತದಲ್ಲಿಯೂ ಯಶಸ್ವಿಗೊಳಿಸಲು ಕಲ್ಯಾಣ ಕರ್ನಾಟಕ ಭಾಗದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಎರಡನೇ ಹಂತದ ಯಾತ್ರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮತ್ತಿತರ ನಾಯಕರು ಹೆಚ್ ಡಿಕೆಗೆ ಸಾಥ್ ನೀಡಲಿದ್ದಾರೆ.
ಮೊದಲ ಹಂತ ಯಶಸ್ವಿ:ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಆರಂಭವಾಗಿತ್ತು. ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮೇಲೆ ಶ್ರೀ ಗಣಪತಿ ದೇವಾಲಯದಲ್ಲಿ ಬೆಳಗ್ಗೆ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡರು ಅವರು ಚಾಲನೆ ನೀಡಿದ್ದರು. ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್ ರಸ್ತೆಯ ಬಾಲಾಜಿ ಭವನದ ಪಕ್ಕದ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಿತು. ಸುಮಾರು ಎರಡು ಲಕ್ಷ ಜನರು ಭಾಗವಹಿಸಿದ್ದರು.